ರಾಹುಲ್‌ ವಿರುದ್ಧ ಕಿಡಿಕಾರಿದ ರಮ್ಯಾ!

ಬೆಂಗಳೂರು: ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರ ವಿರುದ್ಧ ರಾಹುಲ್‌ ಗಾಂಧಿ ಮಾಡಿರುವ ಆರೋಪ ಸದ್ಯ ಕಾಂಗ್ರೆಸ್‌ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ ಎಂದರೆ ತಪ್ಪಾಗಲಾರದು. ಆದರೆ ಬಳಿಕ ಆ ರೀತಿಯ ಹೇಳಿಕೆ ನೀಡಿಯೇ ಇಲ್ಲ ಎಂದು ರಾಹುಲ್‌ ತನ್ನ ಹೇಳಿಕೆಗೆ ತೇಪೆ ಹಚ್ಚಿದರೂ ಯಾವುದೇ ಪ್ರಯೋಜನವಾಗುವ ಲಕ್ಷಣ ಗೋಚರಿಸುತ್ತಿಲ್ಲ. ಪರಿಣಾಮ ರಾಹುಲ್‌ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಟಿ, ಮಾಜಿ ಸಂಸದೆ ರಮ್ಯಾ ಕೂಡ ಇದೀಗ ಯುವರಾಜನ ವಿರುದ್ಧ ಕಿಡಿ ಕಾರಿದ್ದಾರೆ.
ಆ ಒಂದು ಮಾತಿನಿಂದ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ. ಇದೀಗ ನಾನು ಹಾಗೆ ಮಾತನಾಡಿಲ್ಲ ಎಂದು ಸ್ಪಷ್ಟನೆಯನ್ನು ರಾಹುಲ್ ಗಾಂಧಿ ಕೊಟ್ಟಿದ್ದರೂ ಆಗಲೇ ಸಾಕಷ್ಟು ಬೆಳವಣಿಗೆಗಳು ಪಕ್ಷದಲ್ಲಿ ಆಗಿವೆ. ಒಂದು ಕಾಲದ ಅತ್ಯಂತ ಬೆಂಬಲಿಗರಾಗಿದ್ದವರೂ ರಾಹುಲ್ ಮಾತಿಗೆ ಕಿಡಿಕಿಡಿಯಾಗಿದ್ದಾರೆ. ಸದ್ಯ ಮಾಜಿ ಸಂಸದೆ ರಮ್ಯಾ ಅವರು ಕೂಡ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಿರಿಯ ನಾಯಕರ ವಿರುದ್ಧ ಹೇಳಿಕೆ ಕೊಡುವ ಮೂಲಕ ತಪ್ಪು ಮಾಡಿದ್ದಾರೆಂದು ಮಾಜಿ ಸಂಸದೆ ರಮ್ಯಾ ಟ್ವೀಟ್ ಮಾಡಿದ್ದಾರೆ. ಬಿಜೆಪಿ ಜೊತೆಗೆ ಕಾಂಗ್ರೆಸ್ ಹಿರಿಯ ನಾಯಕರು ಸೇರಿಕೊಂಡಿದ್ದಾರೆ ಎಂದು ಹೇಳಿಕೆ ಕೊಟ್ಟಿರುವುದು ಸರಿಯಲ್ಲ. ಜೊತೆಗೆ ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಬರೆದಿರುವ ಪತ್ರವನ್ನು ಮಾಧ್ಯಮಗಳಿಗೆ ಸಿಗುವಂತೆ ಮಾಡಿರುವುದು ಕೂಡ ಸರಿಯಲ್ಲ ಎಂದು ರಮ್ಯಾ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ಪ್ರತಿಕ್ಷಣದ ಚರ್ಚೆ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವುದು ಆಶ್ಚರ್ಯ ಮೂಡಿಸಿದೆ ಎಂದೂ ಅವರು ಟ್ವೀಟ್‌ನಲ್ಲಿ ಪ್ರಸ್ತಾಪ ಮಾಡಿದ್ದಾರೆ.

Leave a Reply

Your email address will not be published. Required fields are marked *