ರಾಮಮಂದಿರ ಭೂಮಿಪೂಜೆಗೆ ಗೈರಾಗಲಿರುವ ಉಮಾಭಾರತಿ!

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ ಶುರುವಾಗಿದ್ದು, ಸಿದ್ಧತೆಗಳು ಕೂಡ ಭರದಿಂದ ಸಾಗುತ್ತಿದೆ. ಆದರೆ ಇತ್ತ ಭೂಮಿ ಪೂಜೆ ಕಾರ್ಯಕ್ರಮದಿಂದ ದೂರ ಉಳಿಯುವುದಾಗಿ ಬಿಜೆಪಿ ಹಿರಿಯ ನಾಯಕಿ ಉಮಾಭಾರತಿ ಟ್ವೀಟ್ ಮೂಲಕ ನಿನ್ನೆ ತಿಳಿಸಿದ್ದಾರೆ. ಯುಪಿಯ ಸಚಿವೆಯೊಬ್ಬರು ಕೊರೊನಾದಿಂದ ಆದಿತ್ಯವಾರ ಮೃತಪಟ್ಟಿದ್ದು, ಅಲ್ಲದೆ ರಾಮಮಂದಿರ ಭೂಮಿಪೂಜೆ ಸ್ಥಳದಲ್ಲಿ ನಿಯೋಜಿಸಲಾಗಿದ್ದ ಹಲವು ಭದ್ರತಾ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಗೈರಾಗಲಿದ್ದಾರೆ ಎನ್ನಲಾಗಿದೆ.
ಕಾರ್ಯಕ್ರಮಕ್ಕೆ ಗೈರಾಗಲಿರುವುದನ್ನು ಅವರು ನಿನ್ನೆ ಟ್ವೀಟ್ ಮೂಲಕ ತಿಳಿಸಿದ್ದಾರೆ. ಕೊರೊನಾ ವೈರಸ್ ಭೀತಿಯಿಂದ ಉಮಾ ಭಾರತಿ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ. ಈ ಬಗ್ಗೆ ಈಗಾಗಲೇ ಅತಿಥಿಗಳ ಪಟ್ಟಿಯಿಂದ ತನ್ನ ಹೆಸರು ಹೊರಗಿಡುವಂತೆ ಕಾರ್ಯಕ್ರಮದ ಹಿರಿಯ ಅಧಿಕಾರಿಗಳಿಗೆ ಹಾಗೂ ಪ್ರಧಾನಿ ಕಾರ್ಯಾಲಯಕ್ಕೂ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಈ ಶುಭಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಳ್ಳುತ್ತಿದ್ದು, ಅವರ ಆರೋಗ್ಯದ ಬಗ್ಗೆ ನನಗೆ ಆತಂಕ ಶುರುವಾಗಿದೆ ಎಂದಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಉಮಾ ಭಾರತಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಸುದ್ದಿ ಕೇಳಿದ ಬಳಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆತಂಕ ಎದುರಾಗಿದೆ. ಅಮಿತ್ ಶಾ ಹಾಗೂ ಬಿಜೆಪಿ ನಾಯಕರಿಗೆ ಕೊರೊನಾ ಪಾಸಿಟಿವ್ ಎಂದು ಸುದ್ದಿ ಕೇಳಿದ ಬಳಿಕ ಭಯ ಶುರುವಾಗಿದೆ. ಅಯೋಧ್ಯೆ ಭೂಮಿ ಪೂಜೆಯಲ್ಲಿ ಭಾಗಿಯಾಗುವವರ ಅದರಲ್ಲೂ ಮೋದಿ ಬಗ್ಗೆ ನನಗೆ ಆತಂಕ ಹೆಚ್ಚಾಗಿದೆ ಎಂದು ಬರೆದುಕೊಂಡಿದ್ದಾರೆ. ಇಂದು (ಸೋಮವಾರ) ನಾನು ಭೋಪಾಲ್ ನಿಂದ ಹೊರಟು ನಾಳೆ (ಮಂಗಳವಾರ) ಸಂಜೆ ಅಯೋಧ್ಯೆ ಸೇರುತ್ತೇನೆ. ಆದರೆ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ. ಯಾಕೆಂದರೆ ಒಂದು ವೇಳೆ ನಾನು ಈ ಶುಭಕಾರ್ಯದಲ್ಲಿ ಪಾಲ್ಗೊಂಡರೆ ನನಗೂ ಸೋಂಕು ಹರಡಬಹುದು. ಪ್ರಧಾನಿ ಮೋದಿಯವರು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಅಹಿತರ ಘಟನೆಗಳು ನಡೆಯಬಾರದು. ಈ ಹಿನ್ನೆಲೆಯಲ್ಲಿ ನಾನು ಮನೆಯಲ್ಲೇ ಕುಳಿತು ಕಾರ್ಯಕ್ರಮ ವೀಕ್ಷಿಸುತ್ತೇನೆ. ಕಾರ್ಯಕ್ರಮ ಮುಗಿಸಿ ಪ್ರಧಾನಿಯವರು ದೆಹಲಿಗೆ ಹೊರಟ ನಂತರ ನಾನು ಅಯೋಧ್ಯೆಗೆ ಹೋಗುತ್ತೇನೆ. ಅಲ್ಲಿಯವರೆಗೆ ಸರಯೂ ನದಿಯ ತಟದಲ್ಲಿ ವಿಹರಿಸುವುದಾಗಿ ಉಮಾ ಭಾರತಿ ಮಾಹಿತಿ ನೀಡಿದ್ದಾರೆ.