ರಶ್ಯಾದ ವಿರೋಧ ಪಕ್ಷದ ನಾಯಕನಿಗೆ ವಿಷಪ್ರಾಶನ?

ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಪ್ರಬಲವಾಗಿ ಟೀಕಿಸುವ ಮೂಲಕ ದೇಶಾದ್ಯಂತ ಗುರುತಿಸಿಕೊಂಡಿದ್ದ ವಿಪಕ್ಷ ನಾಯಕ, ರಷ್ಯಾ ಆಫ್ ದ ಫ್ಯೂಚರ್ನ ನಾಯಕ ಅಲೆಕ್ಸಿ ನವಲ್ನಿ (44) ಸದ್ಯ ಏಕಾಏಕಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಕೋಮಾದಲ್ಲಿದ್ದಾರೆ. ಮೂಲಗಳ ಪ್ರಕಾರ ನವಲ್ನಿಗೆ ವಿಷಪ್ರಾಶನವಾಗಿದೆ ಎಂಬ ಆರೋಪ ಇದೀಗ ಕೇಳಿಬಂದಿದೆ.
ಅಲೆಕ್ಸಿ ನವಲ್ನಿ ಸೈಬೀರಿಯಾದ ಟೋಮ್ಸ್ನಿಂದ ಮಾಸ್ಕೋಗೆ ವಿಮಾನದಲ್ಲಿ ಬರುತ್ತಿದ್ದಾಗ ಅಸ್ವಸ್ಥಗೊಂಡಿದ್ದಾರೆ. ಸದ್ಯ ಅವರು ಸೈಬೀರಿಯಾದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲೆಕ್ಸಿ ನವಲ್ನಿ ಆರೋಗ್ಯವಾಗಿದ್ದರು. ಅವರಿಗೆ ಆಹಾರದಲ್ಲಿ ವಿಷವನ್ನು ನೀಡಿರುವ ಸಾಧ್ಯತೆಯಿದೆ ಎಂದು ನವಲ್ನಿ ಅವರ ವಕ್ತಾರೆ ಕಿರಾ ಯರ್ಮೈಶ್ ಗಂಭೀರ ಆರೋಪ ಮಾಡಿದ್ದಾರೆ. ಮಾಸ್ಕೋಗೆ ಬರುತ್ತಿದಾಗ ದಿಢೀರ್ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿದೆ. ಹೀಗಾಗಿ ವಿಮಾನವನ್ನು ತುರ್ತು ಲ್ಯಾಂಡಿಗ್ ಮಾಡಿ ನವಲ್ನಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನವಲ್ನಿ ಅವರು ಬೆಳಗ್ಗೆ ಚಹಾ ಮಾತ್ರ ಸೇವಿಸಿದ್ದಾರೆ. ಹೀಗಾಗಿ ಚಹಾದಲ್ಲಿ ವಿಷ ಹಾಕಿರುವ ಸಾಧ್ಯತೆಯಿದೆ ಎಂದು ವಕ್ತಾರೆ ಸಂಶಯ ವ್ಯಕ್ತ ಪಡಿಸಿದ್ದಾರೆ. ವಕ್ತಾರೆಯ ಆರೋಪದ ಹಿನ್ನೆಲೆಯಲ್ಲಿ ಈಗ ಕೆಫೆಯಲ್ಲಿರುವ ಸಿಸಿಟಿವಿ ಪರೀಶೀಲನೆ ನಡೆಸಲಾಗುತ್ತಿದೆ. ಆಸ್ಪತ್ರೆಯ ವೈದ್ಯರು ಮಾಧ್ಯಮಗಳ ಜತೆಗೆ ಮಾತನಾಡಿ, ಅಲೆಕ್ಸಿ ನವಲ್ನಿ ಅವರಿಗೆ ವಿಷ ಪ್ರಾಶನ ಮಾಡಲಾಗಿದೆ ಎಂಬ ಅಂಶ ಇದುವರೆಗೆ ದೃಢಪಟ್ಟಿಲ್ಲ ಎಂದು ಹೇಳಿದ್ದಾರೆ. ಪುಟಿನ್ ನೇತೃತ್ವದ ಯುನೈಟೆಡ್ ರಷ್ಯಾ ಪಕ್ಷ ಕಳ್ಳರು ಮತ್ತು ವಂಚರ ಪಕ್ಷವೆಂದು ದೂರಿದ್ದ ನವಲ್ನಿ ಭ್ರಷ್ಟಾಚಾರದ ಆರೋಪ ಮಾಡಿದ್ದರು. 2011ರಲ್ಲಿ ಅವರನ್ನು ಬಂಧಿಸಿ 15 ದಿನಗಳ ಕಾಲ ಜೈಲಿನಲ್ಲಿ ಇರಿಸಲಾಗಿತ್ತು. 2013ರಲ್ಲಿ ಪ್ರಕರಣವೊಂದರಲ್ಲಿ ಶಿಕ್ಷೆ ಅನುಭವಿಸಿದ್ದರು.