ಯುಎಸ್‌ ಓಪನ್‌ನಿಂದ ಹಿಂದೆಸರಿದ ಹಾಲೆಪ್‌

ಲಂಡನ್‌: ಈಗಾಗಲೇ ಪ್ರತಿಷ್ಠಿತ ಯುಎಸ್‌ ಓಪನ್‌ ಟೆನಿಸ್‌ನಿಂದ ಹಲವು ಘಟಾನುಘಟಿ ಆಟಗಾರರು ವಿವಿಧ ಕಾರಣ ನೀಡಿ ಹಿಂದೆ ಸರಿದಿದ್ದು, ಈ ಪಟ್ಟಿಗೀಗ ವಿಶ್ವದ ನಂ.2 ಆಟಗಾರ್ತಿ, ರೊಮೇನಿಯಾದ ಸಿಮೋನಾ ಹಾಲೆಪ್ ಕೂಡ ಸೇರ್ಪಡೆಯಾಗಿದ್ದಾರೆ. ಹಾಲೆಪ್‌ ಸದ್ಯ ಯುಎಸ್ ಓಪನ್‌ನಿಂದ ಹಿಂದೆ ಸರಿಸರಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಕೊರೊನಾವೈರಸ್ ಭೀತಿಯಿಂದಾಗಿ ತಾನು ಟೂರ್ನಿಯಿಂದ ದೂರ ಇರಲು ನಿರ್ಧರಿಸಿರುವುದಾಗಿ ಹಾಲೆಪ್ ತಿಳಿಸಿದ್ದಾರೆ. ‘ಈಗಿನ ಈ ಕೊರೊನಾ ವೇಳೆಯ ವಿಭಿನ್ನ ಸಂದರ್ಭ, ವಾಸ್ತವತೆಯನ್ನು ಗಮನಿಸಿದ ಬಳಿಕ ನಾನು ಯುಎಸ್ ಓಪನ್‌ ಆಡಲು ನ್ಯೂಯಾರ್ಕ್‌ಗೆ ಪ್ರಯಾಣಿಸದಿರಲು ನಿರ್ಧರಿಸಿದ್ದೇನೆ’ ಎಂದು ವಿಂಬಲ್ಡನ್ ಹಾಲಿ ಚಾಂಪಿಯನ್ ಹಾಲೆಪ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಭಾನುವಾರ ಪ್ರೇಗ್ ಓಪನ್‌ ಫೈನಲ್‌ನಲ್ಲಿ ಮೂರನೇ ಶ್ರೇಯಾಂಕಿತೆ, ಬೆಲ್ಜಿಯಂನ ಎಲೈಸ್ ಮೆರ್ಟೆನ್ಸ್ ಅವರನ್ನು 6-2, 7-5ರ ನೇರ ಸೆಟ್‌ನಿಂದ ಮಣಿಸಿದ ಸಿಮೋನಾ, 21ನೇ ವಿಮೆನ್ಸ್ ಟೂರ್ ಅಸೋಸಿಯೇಶನ್ (ಡಬ್ಲ್ಯುಟಿಎ) ಪ್ರಶಸ್ತಿ ತನ್ನದಾಗಿಸಿಕೊಂಡಿದ್ದರು. 2020ರ ಯುಎಸ್ ಗ್ರ್ಯಾಂಡ್‌ಸ್ಲ್ಯಾಮ್ ಟೆನಿಸ್ ಟೂರ್ನಿ ಆಗಸ್ಟ್ 31ರಿಂದ ಸೆಪ್ಟೆಂಬರ್ 13ರ ವರೆಗೆ ನಡೆಯಲಿದೆ. ಅತ್ತ ಈಗಾಗಲೇ ಸ್ಪೇನ್‌ನ ರಾಫೆಲ್‌ ನಡಾಲ್‌ ಹಾಗೂ ಸ್ವಿಟ್ಝರ್‌ಲ್ಯಾಂಡ್‌ನ ರೋಜರ್‌ ಫೆಡರರ್‌ ಟೂರ್ನಿಯಲ್ಲಿ ಭಾಗವಹಿಸಲು ನಿರಾಕರಿಸಿದ್ದು, ಟೂರ್ನಿಗೆ ಹಿನ್ನಡೆ ತಂದಿದೆ. ಇತ್ತ ಡಬ್ಲ್ಯುಟಿಎ ರ್ಯಾಂಕಿಂಗ್‌ನಲ್ಲಿ ದ್ವಿತೀಯ ಶ್ರೇಯಾಂಕಿತೆ ಸಿಮೋನಾ ಹಾಲೆಪ್‌ ಕೂಡ ಹಿಂದೆಸರಿಯುವ ನಿರ್ಧಾರ ತೆಗೆದುಕೊಂಡಿರುವುದು ಸಹಜವಾಗಿಯೇ ಆಯೋಜಕರಿಗೆ ಆಘಾತ ನೀಡಿದಂತಾಗಿದೆ. ಅಲ್ಲದೆ ಈ ನಿರ್ಧಾರದಿಂದ ಹಾಲೆಪ್‌ ಅಭಿಮಾನಿಗಳು ಕೂಡ ನಿರಾಸೆ ಕಂಡಿದ್ದಾರೆ.

Leave a Reply

Your email address will not be published. Required fields are marked *