ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹರಾಜು ಪ್ರಕ್ರಿಯೆ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ತನ್ನ ಅಧೀನದಲ್ಲಿರುವ 300ಕ್ಕೂ ಹೆಚ್ಚು ಮೂಲೆ, ವಾಣಿಜ್ಯ ಹಾಗೂ ಮಧ್ಯಂತರ ನಿವೇಶನಗಳ ಇ-ಹರಾಜು ಪ್ರಕ್ರಿಯೆಯನ್ನು ನಡೆಸಲು ಮುಂದಾಗಿದ್ದು ತಕ್ಷಣವೇ ಇದನ್ನು ಬಿಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಗ್ರಹಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ಪ್ರಾಧಿಕಾರ ಸರ್ವ ಸದಸ್ಯರ ಸಭೆ ಕರೆದು ಚರ್ಚಿಸದೇ ಆಯುಕ್ತರೇ ಈ ನಿರ್ಧಾರ ಪ್ರಕಟಿಸಿರುವುದು ಸರಿಯಲ್ಲ.ತುರ್ತಾಗಿ ವಿವಿಧ ವಿಷಯಗಳ ಕುರಿತಂತೆ ಚರ್ಚಿಸಲು ಸಭೆ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ.
ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿಲ್ಲದ ಮನೆಗಳು ನಿರ್ಮಾಣವಾಗದ ಇನ್ನೂ ಕ್ರಯಪತ್ರ ನೀಡದಿರುವ ಹೊಸ ಬಡಾವಣೆಗಳಾದ ವಸಂತ ನಗರ ಲಾಲ್ ಬಹದ್ದೂರ್ ಶಾಸ್ತ್ರಿ ನಗರ, ಲಲಿತಾದ್ರಿನಗರ, ಆರ್.ಟಿ ನಗರಗಳಲ್ಲಿಯೂ ಮೂಲೆ ಮತ್ತು ವಾಣಿಜ್ಯ ನಿವೇಶನಗಳ ಇ-ಹರಾಜಿಗೆ ಮುಂದಾಗಿದ್ದು ಇದರಿಂದ ಭಾರೀ ನಷ್ಟ ಉಂಟಾಗಲಿದೆ ಎಂದು ತಿಳಿಸಿದ್ದಾರೆ. ಮುಡಾ ನಿಯಮಗಳಲ್ಲಿ ಮಧ್ಯಂತರ ನಿವೇಶನ ಹರಾಜು ಮಾಡಲು ಅವಕಾಶವಿಲ್ಲ. ಆದರೆ ಈ ಹರಾಜಿನಲ್ಲಿ ಶೇ.60ರಷ್ಟು ಮಧ್ಯಂತರ ನಿವೇಶನಗಳನ್ನು ತರಲಾಗಿದೆ. ಮಧ್ಯಂತರ ನಿವೇಶನ ಹರಾಜಿಗೆ ಪ್ರಾಧಿಕಾರದ ಒಪ್ಪಿಗೆ ಪಡೆಯಬೇಕಿದೆ. ಆದರೆ ಈ ಕೆಲಸವೇ ನಡೆದಿಲ್ಲ. ಆದ್ದರಿಂದ ತಕ್ಷಣವೇ ಇ-ಹರಾಜನ್ನು ತಾತ್ಕಾಲಿಕವಾಗಿ ಮುಂದೂಡಬೇಕು ಎಂದು ಆಗ್ರಹಿಸಿದ್ದಾರೆ. ತುರ್ತಾಗಿ ಸಭೆ ನಡೆಸುವಂತೆ ಮೈಸೂರು ಜಿಲ್ಲಾಧಿಕಾರಿಗಳಿಗೂ ಪ್ರಾಧಿಕಾರದ ಅಧ್ಯಕ್ಷರಿಗೂ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *