ಮುಸ್ಲಿಂ ಯುವತಿಯರ ಮತಾಂತರ: ಮಾಜಿ ಬಿಜೆಪಿ ಮೇಯರ್ ವಿರುದ್ಧ ಆರೋಪ

ಆಲಿಘರ್: ಮುಸ್ಲಿಂ ಯುವತಿಯರಿಗೆ ಆಮಿಷವೊಡ್ಡಿ ಹಿಂದೂ ಯುವಕರ ಜೊತೆ ಮದುವೆ ಮಾಡಿಸುತ್ತಿದ್ದಾರೆ ಎಂಬ ಆರೋಪ ಮಾಜಿ ಬಿಜೆಪಿ ಮೇಯರ್ ಶಕುಂತಳಾ ಭಾರತಿ ವಿರುದ್ಧ ಕೇಳಿಬಂದಿದೆ. ಮಹಿಳೆಯೊಬ್ಬರು ಈ ಸಂಬಂಧ ಆರೋಪ ಮಾಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ನಾಪತ್ತೆಯಾಗಿದ್ದ ಯುವತಿಯೊಬ್ಬಳು ಹಿಂದೂ ಯುವಕನನ್ನು ಮದುವೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಪತ್ರಿಕಾಗೋಷ್ಠಿ ನಡೆಸಿದ ಯುವತಿಯ ಸಹೋದರಿ ಗಂಭೀರ ಆರೋಪ ಮಾಡಿದ್ದಾರೆ.
ಯುವತಿ ಆಗಸ್ಟ್ 7ರಂದು ತನ್ನ ಮನೆಯಿಂದ ನಾಪತ್ತೆಯಾದ ನಂತರ ಆಕೆಯ ಸೋದರಿಯ ಪತಿ ಯುವಕನ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದರು. ತನ್ನ ನಾದಿನಿ ಮನೆಯಿಂದ ಚಿನ್ನಾಭರಣ, ನಗದು ತೆಗೆದುಕೊಂಡು ಯುವಕನ ಜತೆ ಪರಾರಿಯಾಗಿದ್ದಾಳೆ ಹಾಗೂ ಆತನನ್ನು ವಿವಾಹವಾಗಲು ಮತಾಂತರಗೊಳ್ಳುತ್ತಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಪ್ರಕರಣ ದಾಖಲಿಸಿದ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಈ ನಡುವೆ ಯುವತಿಯ ಸಹೋದರಿ ಟ್ವೀಟ್ ಮಾಡಿ ಮಾಜಿ ಮೇಯರ್ ಶಕುಂತಳಾ ಅವರು ಮುಸ್ಲಿಂ ಯುವತಿಯರನ್ನು ಅಪಹರಿಸಿ ಅವರನ್ನು ಮತಾಂತರಿಸಿ ಹಿಂದು ಯುವಕರ ಜತೆ ಅವರಿಗೆ ಮದುವೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ಯುವತಿಯನ್ನು ಪತ್ತೆ ಹಚ್ಚಿದ ವೇಳೆ ಆಕೆ ತಾನು ವಯಸ್ಕಳು ಹಾಗೂ ತನ್ನಿಚ್ಛೆಯಂತೆ ವಿವಾಹವಾಗಿರುವುದಾಗಿ ಪೊಲಿಸರಿಗೆ ತಿಳಿಸಿದ್ದಾಳೆ. ಯುವತಿ ಆಗಸ್ಟ್ 10ರಂದು ಆರ್ಯ ಸಮಾಜದಲ್ಲಿ ಯುವಕನನ್ನು ವಿವಾಹವಾಗಿದ್ದಾಗಿಯೂ ತಿಳಿಸಿದ್ದಾಳೆ. `ಶಕುಂತಳಾ ದೇವಿ ನನ್ನ ಸೋದರಿಯನ್ನು ಮತಾಂತರಗೊಳಿಸಿದ್ದಾರೆ. ಸೋದರಿಯ ಜತೆ ಮಾತನಾಡಲೂ ಅವಕಾಶ ನೀಡುತ್ತಿಲ್ಲ’ ಎಂದು ಆರೋಪಿಸಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.