ಮಾರ್ಗನ್-ಮಲಾನ್ ಅರ್ಧಶತಕ: ದ್ವಿತೀಯ ಟಿ-ಟ್ವೆಂಟಿ, ಆಂಗ್ಲರಿಗೆ ಜಯ

ಮ್ಯಾಂಚೆಸ್ಟರ್: ಇಯಾನ್ ಮಾರ್ಗನ್ ಹಾಗೂ ಡೇವಿಡ್ ಮಲಾನ್ ಪ್ರದರ್ಶಿಸಿದ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಇಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಎರಡನೇ ಟಿ-ಟ್ವೆಂಟಿ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಐದು ವಿಕೆಟ್ಗಳ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ೧-೦ ಅಂತರದ ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯ ಮಳೆಯ ಕಾರಣ ರದ್ದುಗೊಂಡಿತ್ತು. ಅತ್ತ ಪಾಕ್ ಪರ ಬಾಬರ್ ಅಜಮ್ ಹಾಗೂ ಮುಹಮ್ಮದ್ ಹಫೀಸ್ ಪ್ರದರ್ಶಿಸಿದ ಆಕರ್ಷಕ ಇನ್ನಿಂಗ್ಸ್ ವ್ಯರ್ಥಗೊಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನಕ್ಕೆ ಬಾಬರ್ (೫೬) ಹಾಗೂ ಫಕರ್ ಝಮಾನ್ (೩೬) ಅಮೋಘ ಆರಂಭ ನೀಡಿದರು. ಇವರು ಮೊದಲ ವಿಕೆಟ್ಗೆ ೭೨ ರನ್ಗಳ ಜೊತೆಯಾಟ ನಡೆಸಿಕೊಟ್ಟರು. ಅಲ್ಲದೆ ನಂತರ ಬಂದ ಮುಹಮ್ಮದ್ ಹಫೀಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ವೇಳೆ ಅರ್ಧಶತಕ ಗಳಿಸಿ ಆಡುತ್ತಿದ್ದ ಬಾಬರ್ ನಿರ್ಗಮಿಸಿದರು. ಈ ವೇಳೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಹಫೀಸ್, ಎದುರಾಳಿ ಆಂಗ್ಲ ಬೌಲರ್ಸ್ಗಳ ಮೇಲೆ ಒತ್ತಡ ಹಾಕಿದರು. ಕೇವಲ ೩೬ ಎಸೆತಗಳಲ್ಲಿ ಐದು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ ೬೯ ರನ್ ಗಳಿಸಿದರು. ಪರಿಣಾಮ ಪಾಕಿಸ್ತಾನ ನಿಗದಿತ ೨೦ ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ೧೯೫ ರನ್ಗಳ ಬೃಹತ್ ಮೊತ್ತ ದಾಖಲಿಸಿತು. ಅತ್ತ ಆಂಗ್ಲ ಪರ ಆದಿಲ್ ರಶೀದ್ ಎರಡು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಆಂಗ್ಲ ಪಡೆಗೆ ಜಾನಿ ಬೈರ್ಸ್ಟೋ (೪೪) ಹಾಗೂ ಟಾಮ್ ಬ್ಯಾಂಟನ್ (೨೦) ಉತ್ತಮ ಆರಂಭ ಒದಗಿಸಿದರು. ಅಲ್ಲದೆ ಮಧ್ಯಮ ಕ್ರಮಾಂಕದಲ್ಲಿ ಮಾರ್ಗನ್ ಹಾಗೂ ಮಲಾನ್ ತೃತೀಯ ವಿಕೆಟ್ಗೆ ೧೧೨ ರನ್ಗಳ ಬೃಹತ್ ಜೊತೆಯಾಟ ನಡೆಸಿದ್ದು, ಪಾಕ್ ಸೋಲಿಗೆ ಕಾರಣವಾಯಿತು. ಪಾಕ್ ಬೌಲರ್ಸ್ಗಳ ಪ್ರತಿಯೊಂದು ದಾಳಿಗೆ ಸೂಕ್ತ ಪ್ರತ್ಯುತ್ತರ ನೀಡುವ ಮೂಲಕ ಈ ಜೋಡಿ ಆಂಗ್ಲ ತಂಡಕ್ಕೆ ಆಸರೆಯಾಯಿತು. ಮಾರ್ಗನ್ ೩೩ ಎಸೆತಗಳಲ್ಲಿ ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ ೬೬ ರನ್ ಗಳಿಸಿದರೆ ಮಲಾನ್ ಅಜೇಯ ೫೪ ರನ್ ಗಳಿಸಿದರು. ಅಂತಿಮವಾಗಿ ತಂಡ ೧೯.೧ ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ೧೯೯ ರನ್ ಗಳಿಸಿ ಜಯ ಸಾಧಿಸಿತು. ಪಾಕ್ ಶಾದಬ್ ಖಾನ್ ಮೂರು ವಿಕೆಟ್ ಪಡದರು.