ಮರವಂತೆ: ಮತ್ತೊಂದು ದೋಣಿ ದುರಂತ-ಮೀನುಗಾರರು ಪಾರು

ಕುಂದಾಪುರ: ಕೆಲವು ದಿನಗಳ ಹಿಂದೆ ನಾಲ್ವರು ಮೀನುಗಾರರು ಕೊಡೇರಿ ಬಳಿಯ ಸಮುದ್ರದಲ್ಲಿ ದೋಣಿ ಮಗುಚಿ ಸಾವಿಗೀಡಾಗಿರುವ ಪ್ರಕರಣ ನಡೆದಿದ್ದು ಮರವಂತೆ ಸಮುದ್ರ ಕಿನಾರೆ ಬಳಿ ಮತ್ತೊಂದು ದೋಣಿ ಅವಘಡ ಸಂಭವಿಸಿದೆ. ಗಂಗೊಳ್ಳಿ ಬಂದರಿನಿಂದ ಹೊರಟ ನಾಡದೋಣಿ ಮರವಂತೆ ಸಮೀಪ ಮಗುಚಿ ಬಿದ್ದ ಪರಿಣಾಮ ಮೀನುಗಾರನಿಗೆ ಗಾಯವಾಗಿವೆ. ಗಾಯಾಳು ಸಹಿತ ದೋಣಿಯಲ್ಲಿದ್ದ ಎಲ್ಲ ಮೀನುಗಾರರು ಈಜಿ ದಡ ಸೇರಿ ಪಾರಾಗಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ಮೂರು ಬಾರಿ ದೋಣಿ ದುರಂತ ಸಂಭವಿಸಿದಂತಾಗಿದೆ. ಗಂಗೊಳ್ಳಿ ಬಂದರಿನಿಂದ `ಆದಿ ಆಂಜನೇಯ’ ಹೆಸರಿನ ನಾಡದೋಣಿಯಲ್ಲಿ ನಾಲ್ವರು ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಮರವಂತೆಯ ಸಮೀಪ ತೆರೆಯ ರಭಸಕ್ಕೆ ದಿಬ್ಬಕ್ಕೆ ಹೊಡೆದು ದೋಣಿ ಮಗುಚಿ ಬಿದ್ದಿದೆ. ಅದೃಷ್ಟವಶಾತ್ ದೋಣಿಯಲ್ಲಿದ್ದ ನಾಲ್ವರು ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾಲಕ ಶ್ರೀನಿವಾಸ ಖಾರ್ವಿ ಎಂಬವರ ಕಾಲಿನ ಮೇಲೆ ದೋಣಿ ಬಿದ್ದ ಪರಿಣಾಮ ಗಂಭೀರ ಏಟಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ದೋಣಿಯ ಇಂಜಿನ್ ಸಮುದ್ರಪಾಲಾಗಿದೆ. ಜಿಲ್ಲೆಯಲ್ಲಿ ಪದೇ ಪದೇ ದುರ್ಘಟನೆ ಸಂಭವಿಸುತ್ತಿರುವುದರಿಂದ ಮೀನುಗಾರರಲ್ಲಿ ಆತಂಕ ಮನೆಮಾಡಿದೆ.