ಮನೆ ನೆಲಸಮ, ಬಡಕುಟುಂಬ ಬೀದಿಪಾಲು! ಉಳ್ಳಾಲದಲ್ಲಿ ವೈದ್ಯ ಕುಟುಂಬದ ಅಮಾನವೀಯ ವರ್ತನೆ!!

ಜಯಕಿರಣ ವರದಿ
ಮಂಗಳೂರು: ೨೩ ವರ್ಷಗಳ ಸುರ್ದೀರ್ಘ ಅವಧಿಯಲ್ಲಿ ಬಡಕುಟುಂಬವೊಂದು ವಾಸವಿದ್ದ ಮನೆಯನ್ನು ಜಮೀನು ಮಾಲಕ, ವೈದ್ಯರೋರ್ವರು ಏಕಾಏಕಿ ನೆಲಸಮಗೊಳಿಸಿ ಕುಟುಂಬವನ್ನು ಬೀದಿಪಾಲು ಮಾಡಿದ ಅಮಾನವೀಯ ಪ್ರಕರಣವೊಂದು ಉಳ್ಳಾಲದಲ್ಲಿ ನಡೆದಿದೆ.
ಉಳ್ಳಾಲದ ಸುಭಾಷ್ನಗರ ದೀನ್ ದಯಾಳ್ ರಸ್ತೆಯಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿ ವೈದ್ಯರೋರ್ವರಿಗೆ ಸಂಬಂಧಿಸಿದ ೭೫ ಸೆಂಟ್ಸ್ ಜಮೀನು, ಅದರಲ್ಲಿ ೫೦ ತೆಂಗಿನ ಮರಗಳಿವೆ. ೨೩ ವರ್ಷಗಳ ಹಿಂದೆ ಉಪ್ಪಿನಂಗಡಿಯ ಇಬ್ರಾಹಿಂ ಮತ್ತು ಪತ್ನಿ ಜಮೀಲಾ ಎಂಬವರು ಉಳ್ಳಾಲಕ್ಕೆ ಆಗಮಿಸಿದ್ದು, ಅವರನ್ನು ಸಂಪರ್ಕಿಸಿದ್ದ ವೈದ್ಯರು, ಇಲ್ಲೇ ಇದ್ದು ತಮ್ಮ ಜಮೀನು ನೋಡಿಕೊಳ್ಳುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅದೇ ಜಮೀನಿನಲ್ಲಿ ಜೋಪಡಿ ಕಟ್ಟಿಕೊಂಡು ವಾಸ ಆರಂಭಿಸಿದ ಕುಟುಂಬ, ೨೩ ವರ್ಷಗಳ ಸುದೀರ್ಘ ಅವಧಿಯಲ್ಲಿ ಹಂತಹಂತವಾಗಿ ಸುಮಾರು ಎರಡು ಲಕ್ಷ ವೆಚ್ಚದಲ್ಲಿ ಸಿಮೆಂಟ್ ಶೀಟಿನ ಮೇಲ್ಛಾವಣಿಯ ಸಣ್ಣದೊಂದು ಮನೆಯನ್ನು ನಿರ್ಮಿಸಿ ವಾಸವಿದ್ದರು.
ದಂಪತಿಗೆ ಮೂರು ಗಂಡು ಮತ್ತು ಮೂರು ಹೆಣ್ಮಕ್ಕಳಿದ್ದು ಓರ್ವ ಮಗನ ಎರಡೂ ಕಾಲುಗಳು ಪೋಲಿಯೋಪೀಡಿತವಾಗಿದೆ. ಇನ್ನೋರ್ವ ಮಗ ಹೋಟೆಲ್ನಲ್ಲಿ ಕ್ಲಿನರ್ ಆಗಿದ್ದರೆ, ಮತ್ತೊಬ್ಬ ಶಾಲೆಗೆ ಹೋಗುತ್ತಿದ್ದಾನೆ. ಹೆಣ್ಮಕ್ಕಳು ಮದುವೆಯ ಪ್ರಾಯಕ್ಕೆ ಬಂದಿದ್ದಾರೆ. ಈ ನಡುವೆ ಇಬ್ರಾಹಿಂ ಅವರು ಕಳೆದ ವರ್ಷ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದರಿಂದಾಗಿ ಕುಟುಂಬವನ್ನು ನಿರ್ವಹಿಸುವ ಜವಾಬ್ದಾರಿ ಹೋಟೆಲ್ನಲ್ಲಿ ಕ್ಲಿನರ್ ಆಗಿರುವ ಮಗನ ಹೆಗಲ ಮೇಲೆ ಬಿದ್ದಿದೆ.
ಕಳೆದ ೨೩ ವರ್ಷಗಳಿಂದ ತನ್ನ ಜಮೀನು ಸುರಕ್ಷಿತವಾಗಿ ನೋಡಿಕೊಂಡಿದ್ದ ಕುಟುಂಬದ ಪ್ರಾಮಾಣಿಕತೆಯನ್ನು ಮೆಚ್ಚಿದ ವೈದ್ಯರು, ಹತ್ತು ಸೆಂಟ್ಸ್ ಜಮೀನು ಕುಟುಂಬಕ್ಕೆ ನೀಡುವುದಾಗಿಯೂ, ಹೆಣ್ಮಕ್ಕಳ ಮದುವೆಯ ಸಂದರ್ಭದಲ್ಲಿ ಸಹಾಯ ಮಾಡುವುದಾಗಿಯೂ ಮೌಖಿಕವಾಗಿ ಭರವಸೆ ನೀಡಿದ್ದರು ಎನ್ನುತ್ತಾರೆ ಸ್ಥಳೀಯರು. ಅವರ ಮಾತನ್ನು ನಂಬಿದ್ದ ಕುಟುಂಬಕ್ಕೆ ವೈದ್ಯರು ಅಘಾತ ನೀಡಿದ್ದಾರೆ. ನಿನ್ನೆ ಬೆಳಿಗ್ಗೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಏಕಾಏಕಿ ಜೆಸಿಬಿ ಸ್ಥಳಕ್ಕೆ ಬಂದಿದ್ದು, ಮನೆಯನ್ನು ನೆಲಸಮಗೊಳಿಸಿದೆ. ಅದಕ್ಕಿಂತ ಮೊದಲು ಮನೆಯೊಳಗಿದ್ದ ವಸ್ತುಗಳನ್ನು ಹೊರಕ್ಕೆಸೆಯಲಾಗಿದೆ. ಈ ಬಗ್ಗೆ ಕಿಂಚಿತ್ ಮಾಹಿತಿಯನ್ನೂ ನೀಡದ ಕಾರಣ ಮನೆಯಲ್ಲಿದ್ದ ಎಲ್ಲ ವಸ್ತುಗಳೂ ಮಣ್ಣಿನಡಿ ಸೇರಿದ್ದಲ್ಲದೆ ಕುಟುಂಬವೂ ಬೀದಿಗೆ ಬಿದ್ದಿದೆ. ಈ ವಿಚಾರವಾಗಿ ಸ್ಥಳೀಯರು ವೈದ್ಯರ ಮನೆಯವರನ್ನು ಸಂಪರ್ಕಿಸಿದರೂ ಪ್ರಯೋಜನ ಆಗಿಲ್ಲ ಎನ್ನುವ ಆರೋಪ ಸ್ಥಳೀಯವಾಗಿ ಕೇಳಿ ಬಂದಿದೆ.


