ಮನಪಾದಲ್ಲಿ ಬಿಲ್ಡರ್ ಆದೇಶದ ಪಾಲನೆಯಾಗುತ್ತಿದೆ: ಎ.ಸಿ.ವಿನಯ್‍ರಾಜ್ ಆರೋಪ

ಜಯಕಿರಣ ವರದಿ
ಮಂಗಳೂರು: ಕೇಂದ್ರ ಮಾರುಕಟ್ಟೆ ವಿಚಾರದಲ್ಲಿ ನ್ಯಾಯಾಲಯದ ಆದೇಶ ವರ್ತಕರ ಪರ ಇರುವಾಗ ಜಿಲ್ಲಾಧಿಕಾರಿ ಮಾರುಕಟ್ಟೆ ಬಂದ್ ಮಾಡಲು ಅದೇಶ ನೀಡುವಂತಿಲ್ಲ. ಆದರೆ ಶಾಸಕ ವೇದವ್ಯಾಸ್ ಕಾಮತ್, ಸಂಸದ ನಳಿನ್‍ಕುಮಾರ್ ಕಟೀಲ್ ಮತ್ತು ಮಂಗಳೂರಿನ ಓರ್ವ ಬಿಲ್ಡರ್‍ನ ಆದೇಶವನ್ನು ಮನಪಾ ಪಾಲನೆ ಮಾಡುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಸಿ.ವಿನಯ್ ರಾಜ್ ಆರೋಪಿಸಿದ್ದಾರೆ.
ನಿನ್ನೆ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮಾರುಕಟ್ಟೆಯಲ್ಲಿ 597 ವರ್ತಕರು ವ್ಯಾಪಾರ ಮಾಡುತ್ತಿದ್ದು, ಎರಡು ಸಾವಿರ ಕುಟುಂಬ ಇವರನ್ನು ಆಶ್ರಯಿಸಿದೆ. ಅಲ್ಲದೆ ಕೂಲಿ ಕಾರ್ಮಿಕರು, ಟೆಂಪೋ, ಅಟೋ ಚಾಲಕರ ಸಹಿತ ಹತ್ತು ಸಾವಿರ ಮಂದಿ ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ಮಾರುಕಟ್ಟೆ ಸ್ಮಾರ್ಟ್‍ಸಿಟಿಯಡಿ ಸುಸಜ್ಜಿತವಾಗಿ ನಿರ್ಮಾಣ ಆಗಬೇಕು ಎಂದು ಮನಪಾದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದ ಸಂದರ್ಭ ತೀರ್ಮಾನಿಸಿತ್ತು. ಆದರೆ ಈಗಿನ ಬಿಜೆಪಿ ಆಡಳಿತ ಜಿಲ್ಲಾಧಿಕಾರಿಯನ್ನು ಬಳಸಿಕೊಂಡು ಮಾರುಕಟ್ಟೆ ವಿಚಾರದಲ್ಲಿ ವರ್ತಕರಿಗೆ ವಿರುದ್ಧವಾಗಿ ವರ್ತಿಸಿದೆ ಎಂದು ವಿನಯ್‍ರಾಜ್ ಟೀಕಿಸಿದರು.
ಮಾರುಕಟ್ಟೆ ಬಂದ್ ಮಾಡಬೇಕಾದರೆ ಸರ್ಕಾರ ಅದೇಶ ನೀಡಬೇಕಿದ್ದರೂ ಕಾನೂನು ಗಾಳಿಗೆ ತೂರಿ, ಕೊರೊನಾ ನೆಪದಲ್ಲಿ ಮನಪಾ ಬೀಗ ಹಾಕಿ ವರ್ತಕರನ್ನು ಬೀದಿಗೆ ತಂದಿದೆ. ಅಲ್ಲದೆ ನೀರು, ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ. ಈ ವಿಚಾರದಲ್ಲಿ ಶಾಸಕ, ಸಂಸದರು ಪ್ರಮುಖ ಪಾತ್ರ ವಹಿಸಿದ್ದಾರೆ. ಜನಪ್ರತಿನಿಧಿಗಳು ಜನರ ಧ್ವನಿಯಾಗಿ ಕೆಲಸ ಮಾಡಬೇಕಿದ್ದರೂ ಮಾರುಕಟ್ಟೆಯ ವಿಚಾರದಲ್ಲಿ ವಿರುದ್ಧವಾಗಿ ವರ್ತಿಸಿದ್ದಾರೆ. ಇಂಥವರು ನಮ್ಮಲ್ಲಿದ್ದಾರೆ ಎನ್ನುವುದೇ ದುರಂತ. ವರ್ತಕರು ಕಾನೂನು ಹೋರಾಟ ನಡೆಸಿದಾಗ ಮನಪಾ ನೀಡಿದ್ದ ನೋಟಿಸ್ ವಾಪಾಸ್ ಪಡೆದಿರುವ ಬಗ್ಗೆ ನ್ಯಾಯಾಲಯಕ್ಕೆ ಬರೆದು ಕೊಟ್ಟು ಹಿನ್ನಡೆ ಅನುಭವಿಸಿತ್ತು. ಆದರೆ ಈಗ ಮತ್ತೆ ಜಿಲ್ಲಾಧಿಕಾರಿಯನ್ನು ಬಳಸಿ ಬೀಗ ಹಾಕಲಾಗಿದೆ. ಕದ್ರಿ ಮಾರುಕಟ್ಟೆಯಲ್ಲೂ ಕೊರೊನಾ ಬಂದಿತ್ತು. ಎಪಿಎಂಸಿಯಲ್ಲೂ ಐವತ್ತಕ್ಕೂ ಅಧಿಕ ಮಂದಿಗೆ ಕೊರೊನಾ ಬಂದರೂ ಬಂದ್ ಆಗಿಲ್ಲ. ಮಾರುಕಟ್ಟೆಯಲ್ಲಿ ಗ್ರಾಹಕರು ಸಾಮಾಜಿಕ ಅಂತರ ಕಾಪಾಡದಿದ್ದರೆ ಮನಪಾ ಅಧಿಕಾರಿಗಳು ಮಾರ್ಗದರ್ಶನ ನೀಡಬೇಕಿತ್ತು ಎಂದು ವಿನಯ್‍ರಾಜ್ ಪ್ರತಿಪಾದಿಸಿದ್ದಾರೆ.
ಜಪ್ಪು, ಕಂಕನಾಡಿ, ಕದ್ರಿ, ಉರ್ವ ಮಾರುಕಟ್ಟೆ ಕಾಂಗ್ರೆಸ್ ಅವಧಿಯಲ್ಲಿ ನಿರ್ಮಾಣ ಆಗಿದ್ದು, ಈ ಸಂದರ್ಭದಲ್ಲಿ ಸುಸಜ್ಜಿತ ತಾತ್ಕಾಲಿಕ ಮಾರುಕಟ್ಟೆಯ ವ್ಯವಸ್ಥೆಯನ್ನು ಮಾಡಿ ವರ್ತಕರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ. ಆದರೆ ಇದು ಬಿಜೆಪಿಗೆ ಅರ್ಥವಾಗುತ್ತಿಲ್ಲ. ಇವರಿಗೆ ಅಧಿಕಾರ ನಡೆಸಲು ಗೊತ್ತಿಲ್ಲದಿದ್ದರೆ ಪ್ರತಿಪಕ್ಷವಾಗಿ ನಾವು ಸಲಹೆ, ಸೂಚನೆಗಳನ್ನು ನೀಡುತ್ತೇವೆ. ಆದರೆ ನಮ್ಮನ್ನೂ ಹತ್ತಿರ ಸುಳಿಯಲು ಬಿಡುತ್ತಿಲ್ಲ. ಮನಪಾದಲ್ಲಿ ಅಭಿವೃದ್ಧಿಗೆ ಹಣ ಇಲ್ಲ ಎನ್ನುವ ಕಾರಣದಿಂದ ಕಾರ್ಪೊರೇಟರ್‍ಗಳಿಗೆ ಚಿಕ್ಕಾಸು ಅನುದಾನವನ್ನೂ ನೀಡಿಲ್ಲ. ಆದರೆ ಕ್ರೀಡೆಗೆ ಸೀಮಿತವಾಗಿರುವ ನೆಹರೂ ಮೈದಾನವನ್ನು ಅತಿಕ್ರಮಣ ಮಾಡಿ ಸ್ಮಾರ್ಟ್‍ಸಿಟಿ ಅನುದಾನದ ಆರೂವರೆ ಕೋಟಿ ಹಣದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಟೆಂಟ್ ಹಾಕಿ ಹಣವನ್ನು ಪೋಲು ಮಾಡಲು ಮುಂದಾಗಿದ್ದು ಉಚ್ಚನ್ಯಾಯಾಲಯ ಇದಕ್ಕೂ ತಡೆ ನೀಡಿದೆ. ಮಾರುಕಟ್ಟೆಯ ವರ್ತಕರಿಗೆ ಮೂಲಸೌಕರ್ಯ ಒದಗಿಸಬೇಕಾದ ಮನಪಾ, ಬೀಗ ಹಾಕಿಸಿ ದೌರ್ಜನ್ಯ ಮೆರೆದಿದೆ ಎಂದು ವಿನಯ್‍ರಾಜ್ ಟೀಕಿಸಿದರು.
ಎಪಿಎಂಸಿಯ ಹಣ ಎಲ್ಲಿಗೆ ಹೋಗುತ್ತಿದೆ?
ಕೇಂದ್ರ ಮಾರುಕಟ್ಟೆಯ ವಿಚಾರದಲ್ಲಿ ಎಪಿಎಂಸಿ ಅಧ್ಯಕ್ಷರು ಮಾತನಾಡಿದ್ದಾರೆ. ಅದರೆ ಈ ಮಾರುಕಟ್ಟೆ ಮನಪಾ ಅಧೀನದಲ್ಲಿದೆಯೇ ಅಥವಾ ಎಪಿಎಂಸಿ ಅಧೀನದಲ್ಲಿದೆಯೇ ಎನ್ನುವ ಧ್ವಂಧ್ವ ನಿಲುವಿನ ಬಗ್ಗೆ ಮನಪಾ ಸ್ಪಷ್ಟೀಕರಣ ನೀಡಬೇಕಿದೆ. ಎಪಿಎಂಸಿಯಲ್ಲಿ ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದ ಕಾರಣ ಅವರು ಮಾರುಕಟ್ಟೆಗೆ ಬಂದಿದ್ದಾರೆ. ಅದಲ್ಲದೆ ಇಲ್ಲಿನ ಡಿವೈಡರ್‍ನಲ್ಲಿರುವ ವ್ಯಾಪಾರಿಗಳಿಂದ ದಿನಕ್ಕೆ ಇನ್ನೂರು ರೂಪಾಯಿ ಸಂಗ್ರಹ ಮಾಡಲಾಗುತ್ತಿದ್ದರೂ ಆ ಹಣ ಎಲ್ಲಿಗೆ ಹೋಗುತ್ತದೆ ಎನ್ನುವ ಬಗ್ಗೆ ಅಧ್ಯಕ್ಷರು ತಿಳಿಸಬೇಕು ಎಂದು ವಿನಯ್‍ರಾಜ್ ಆಗ್ರಹಿಸಿದ್ದಾರೆ. ಕಾರ್ಪೊರೇಟರ್‍ಗಳಾದ ಪ್ರವೀಣ್‍ಚಂದ್ರ ಆಳ್ವ, ಝೀನತ್, ಅನಿಲ್ ಕುಮಾರ್, ಮುಖಂಡರಾದ ವಿಶ್ವಾಸ್‍ಕುಮಾರ್ ದಾಸ್ ಸಂಶುದ್ದೀನ್ ಹಾಗೂ ಅನ್ವಿತ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
