ಮದ್ದಡ್ಕ: ನ್ಯಾಯ ಬೆಲೆ ಅಂಗಡಿ ತೆರೆಯಲು ಗ್ರಾಮಸ್ಥರ ಆಗ್ರಹ!

ಬೆಳ್ತಂಗಡಿ: ದಿನೇ ದಿನೇ ಅಭಿವೃದ್ದಿ ಹೊಂದುತ್ತಿರುವ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮದ್ದಡ್ಕ ಪೇಟೆಯು ಜನರಿಗೆ ಅತೀ ಅವಶ್ಯಕವಾಗಿರುವ ಕೆಲವು ಮೂಲಭೂತ ಸಮಸ್ಯೆಗಳನ್ನು ಹೊಂದಿದ್ದು ಅವುಗಳಲ್ಲಿ ನ್ಯಾಯ ಬೆಲೆ ಅಂಗಡಿಯು ಕೂಡಾ ಒಂದು. ಮದ್ದಡ್ಕ ವ್ಯಾಪ್ತಿಯಲ್ಲಿ ಸುಮಾರು ಸಾವಿರ ಮನೆಗಳಿದ್ದು ಸರಕಾರದಿಂದ ಸಿಗುವ ಪಡಿತರ ವಸ್ತುಗಳನ್ನು ಪಡೆಯಲು ಈಗ ಇರುವ ಗುರುವಾಯನಕೆರೆಯ ನ್ಯಾಯ ಬೆಲೆ ಅಂಗಡಿಗೆ ಹೋಗುವುದು ಅನಿವಾರ್ಯವಾಗಿದೆ.
ಕುವೆಟ್ಟು ಗ್ರಾಮ ವ್ಯಾಪ್ತಿಯ ಗುರುವಾಯನಕೆರೆ ವ್ಯಾಪ್ತಿಯಲ್ಲಿ ಕೂಡಾ ಸಾವಿರದಷ್ಟು ಮನೆಗಳಿದ್ದು, ಇದರೊಂದಿಗೆ ಮದ್ದಡ್ಕದ ದೊಡ್ಡ ಸಂಖ್ಯೆಯ ಪಡಿತರದಾರರು ಕೂಡಾ ಗುರುವಾಯನಕೆರೆಯಲ್ಲಿರುವ ಒಂದೇ ಒಂದು ನ್ಯಾಯ ಬೆಲೆ ಅಂಗಡಿಯನ್ನು ಅವಲಂಬಿಸಬೇಕಾಗಿದೆ. ಕೆಲವು ಸಮಯದ ಹಿಂದೆ ಮದ್ದಡ್ಕದಲ್ಲೇ ನ್ಯಾಯ ಬೆಲೆ ಅಂಗಡಿ ಇತ್ತು. ಆಮೇಲೆ ಅದು ಗುರುವಾಯನಕೆರೆಗೆ ವರ್ಗಾವಣೆಯಾದ ಕಾರಣ ಏನೆಂದು ಇದುವರೆಗೂ ಮದ್ದಡ್ಕದ ನಾಗರಿಕರಿಗೆ ಗೊತ್ತಿಲ್ಲ. ಸರಕಾರದಿಂದ ಬಡವರಿಗೆ ಸಿಗುವ ಪಡಿತರ ವಸ್ತುಗಳನ್ನು ಪಡೆಯಲು, ದೂರದ ಗುರುವಾಯನಕೆರೆಯ ನ್ಯಾಯ ಬೆಲೆ ಅಂಗಡಿಯಲ್ಲಿ, ಅನ್ಯಾಯವಾಗಿ ಗಂಟೆಗಟ್ಟಲೆ, ದಿನಗಟ್ಟಲೆ ಸರತಿಯ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಮದ್ದಡ್ಕ ನಾಗರಿಕರದ್ದು.
ಮೊದಲೇ ಮದ್ದಡ್ಕದ ಹೆಚ್ಚಿನ ಮಂದಿ ಪಡಿತರ ಚೀಟಿದಾರರು ದಿನಗೂಲಿ ಕೂಲಿ ಕಾರ್ಮಿಕರಾಗಿದ್ದು ತಾವು ತಮ್ಮ ದುಡಿಮೆಯನ್ನು ಬಿಟ್ಟು ದಿನಗಟ್ಟಲೆ, ಗಂಟೆಗಟ್ಟಲೆ ಗುರುವಾಯನಕೆರೆಯ ನ್ಯಾಯ ಬೆಲೆ ಅಂಗಡಿಯಲ್ಲಿ ಸರತಿಯ ಸಾಲಿನಲ್ಲಿ ನಿಲ್ಲಬೇಕಾಗಿದೆ. ಇದರೊಂದಿಗೆ ನೆಟ್‍ವರ್ಕ್ ಸಮಸ್ಯೆ ಹಾಗೂ ಇತರ ತಾಂತ್ರಿಕ ಸಮಸ್ಯೆಗಳು ಎದುರಾದರೆ, ಪಡಿತರ ವಸ್ತುಗಳನ್ನು ಪಡೆಯುವುದು ಇನ್ನಷ್ಟು ವಿಳಂಬವಾಗುತ್ತದೆ. ಅದರೊಂದಿಗೆ ನ್ಯಾಯ ಬೆಲೆ ಅಂಗಡಿಯ ಸಿಬ್ಬಂದಿಗಳು ಕೂಡಾ ಈ ದೊಡ್ಡ ಸಂಖ್ಯೆಯ ಪಡಿತರದಾರರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಗಿದೆ. ಆದರೂ ಅವರು ತನ್ನ ಶಕ್ತಿ ಮೀರಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆಲ್ಲ ಒಂದೇ ಪರಿಹಾರ ಮದ್ದಡ್ಕದಲ್ಲಿ ಮತ್ತೆ ನ್ಯಾಯ ಬೆಲೆ ಅಂಗಡಿಯನ್ನು ಪ್ರಾರಂಭ ಮಾಡುವುದು. ಇದರೊಂದಿಗೆ ಗುರುವಾಯನಕೆರೆ ನ್ಯಾಯ ಬೆಲೆ ಅಂಗಡಿಯ ಸರತಿಯ ಸಾಲು, ಒತ್ತಡ ಕೂಡಾ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ ಹಾಗೂ ಮದ್ದಡ್ಕದ ನಾಗರಿಕರಿಗೂ ಅನುಕೂಲವಾಗುತ್ತದೆ. ಪಡಿತರ ಪಡೆಯಲು ಕೆಲಸ ರಜೆ ಮಾಡುವುದು ಕೂಡಾ ತಪ್ಪುತ್ತದೆ. ಆದ್ದರಿಂದ ಕುವೆಟ್ಟು ಮದ್ದಡ್ಕ ವ್ಯಾಪ್ತಿಯ ಸರ್ವ ಜನಪ್ರತಿನಿದಿಗಳು ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಿ ಮದ್ದಡ್ಕ ನಾಗರಿಕರಿಗೆ ಅತೀ ಅವಶ್ಯಕವಾಗಿರುವ ನ್ಯಾಯ ಬೆಲೆ ಅಂಗಡಿಯ ವ್ಯವಸ್ಥೆ ಮಾಡಿಕೊಡಿ ಎಂದು ಮದ್ದಡ್ಕದ ನಾಗರಿಕರು ಒಕ್ಕೊರಳಿನಿಂದ ಆಗ್ರಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *