ಮತ್ತೊಮ್ಮೆ ಮಿಂಚಿದ ನಾರೈನ್ ಟ್ರಿನ್ ಬಾಗೊಗೆ ಸುಲಭ ಜಯ

ತರೌಬಾ: ಬ್ಯಾಟಿಂಗ್ ಹಾಗೂ ಬೌಲಿಂಗ್‍ನಲ್ಲಿ ಸುನೀಲ್ ನಾರೈನ್ ಪ್ರದರ್ಶಿಸಿದ ಮತ್ತೊಂದು ಅಮೋಘ ಆಟದ ನೆರವಿನಿಂದ ಇಲ್ಲಿ ಜಮೈಕಾ ತಲ್ಲವ್ಹಾಸ್ ವಿರುದ್ಧದ ಕೆರೇಬಿಯನ್ ಪ್ರೀಮಿಯರ್‍ನ ಲೀಗ್‍ನ ಆರನೇ ಪಂದ್ಯದಲ್ಲಿ ಟ್ರಿನ್‍ಬಾಗೊ ನೈಟ್ ರೈಡರ್ಸ್ ಏಳು ವಿಕೆಟ್‍ಗಳ ಜಯ ಸಾಧಿಸಿದೆ. ಇದು ಪ್ರಸಕ್ತ ಟೂರ್ನಿಯಲ್ಲಿ ಟ್ರಿನ್‍ಬಾಗೊಗೆ ಸತತ ಎರಡನೇ ಗೆಲುವಾಗಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಜಮೈಕಾ ತಲ್ಲವ್ಹಾಸ್ ಪರ ಗ್ಲೆನ್ ಫಿಲಿಪ್ಸ್ (58) ಹೊರತುಪಡಿಸಿ ಉಳಿದೆಲ್ಲಾ ದಾಂಡಿಗರು ವಿಫಲತೆ ಕಂಡರು. ಅಲ್ಲದೆ ಮಧ್ಯಮ ಕ್ರಮಾಂಕದಲ್ಲಿ ಆಸಿಫ್ ಅಲಿ 22 ರನ್‍ಗಳ ಉಪಯುಕ್ತ ಕಾಣಿಕೆ ನೀಡಿದರು. ಫಿಲಿಪ್ಸ್ 42 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ 58 ರನ್ ಗಳಿಸಿದರು. ಅಂತಿಮವಾಗಿ ತಂಡ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತು. ಟ್ರಿನ್‍ಬಾಗೊ ಪರ ಸೀಲ್ಸ್ ಹಾಗೂ ಅಲಿ ಖಾನ್ ತಲಾ ಎರಡು ವಿಕೆಟ್ ಪಡೆದರೆ ನಾರೈನ್ ಒಂದು ವಿಕೆಟ್ ಪಡೆದರು.
ಅತ್ತ ಗುರಿ ಬೆನ್ನತ್ತಿದ ಟ್ರಿನ್‍ಬಾಗೊ ಪರ ಉತ್ತಮ ಫಾರ್ಮ್‍ನಲ್ಲಿರುವ ನಾರೈನ್ ಸ್ಫೋಟಕ ಆರಂಭವನ್ನೇ ನೀಡಿದರು. ಕೇವಲ 38 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ ನಾರೈನ್ 53 ರನ್ ಗಳಿಸಿದರು. ಅಲ್ಲದೆ ನಂತರ ಬಂದ ಮುನ್ರೋ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ ಅಜೇಯ 49 ರನ್ ಗಳಿಸಿ, ತಂಡವನ್ನು ಗೆಲುವಿನ ದಡ ಸೇರಿಸಿದರು. ಪರಿಣಾಮ ತಂಡ 18.1 ಓವರ್‍ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿ, ಜಯ ಸಾಧಿಸಿತು. ಜಮೈಕಾ ತಲ್ಲವ್ಹಾಸ್ ಪರ ಮುಜಿಬ್ ಉರ್ ರೆಹ್ಮಾನ್ ಒಂದು ವಿಕೆಟ್ ಪಡೆದರು. ಬ್ಯಾಟಿಂಗ್ ಹಾಗೂ ಬೌಲಿಂಗ್‍ನಲ್ಲಿ ಮಿಂಚಿದ ನಾರೈನ್ ಅರ್ಹರಾಗಿಯೇ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.