ಮಂಗಳೂರು: ಲೇಡಿಸ್ ಪಿಜಿಯಲ್ಲಿ ಇಣುಕುತ್ತಿದ್ದ ‘ವಿಕೃತಕಾಮಿ’ಗೆ ಯುವತಿಯರಿಂದಲೇ ಧರ್ಮದೇಟು!!

ಮಂಗಳೂರು: ನಗರದ ಶರವು ಮಹಾಗಣಪತಿ ದೇವಸ್ಥಾನ ಬಳಿಯ ಲೇಡಿಸ್ ಪಿಜಿಗೆ ಕಳೆದ ನಾಲ್ಕೈದು ತಿಂಗಳುಗಳಿಂದ ಬಂದು ಯುವತಿಯರ ಬಟ್ಟೆ ಕದಿಯುತ್ತಿದ್ದ, ವಿಕೃತ ವರ್ತನೆ ತೋರುತ್ತಿದ್ದ ವಿಕೃತಕಾಮಿಯನ್ನು ಯುವತಿಯರೇ ರೆಡ್ ಹ್ಯಾಂಡ್ ಆಗಿ ಹಿಡಿದು ಧರ್ಮದೇಟು ನೀಡಿದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಘಟನೆಯ ವಿವರ:
ಶರವು ದೇವಸ್ಥಾನ ಬಳಿಯ ಪಿಜಿಯಲ್ಲಿ 40ಕ್ಕೂ ಹೆಚ್ಚು ಯುವತಿಯರು ವಾಸ್ತವ್ಯವಿದ್ದು ಇಲ್ಲಿಗೆ ಕಳೆದ ಕೆಲವು ತಿಂಗಳುಗಳಿಂದ ವ್ಯಕ್ತಿಯೊಬ್ಬ ರಾತ್ರಿ ಏಕಾಏಕಿ ಪ್ರವೇಶ ಮಾಡಿ ಯುವತಿಯರ ಬಟ್ಟೆಗಳನ್ನು ಕದಿಯುವುದು, ರೂಮಿಗೆ ಪ್ರವೇಶಿಸಿ ವಿಕೃತವಾಗಿ ನಡೆದುಕೊಳ್ಳುವುದು ಮಾಡುತ್ತಿದ್ದ. ಈ ಹಿಂದೆ ಎರಡು ಬಾರಿ ಈತನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು. ಆದರೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಮರುದಿನವೇ ಆತನನ್ನು ಬಿಟ್ಟು ಕಳುಹಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ನಿನ್ನೆ ತಡರಾತ್ರಿಯೂ ಏಕಾಏಕಿ ವಿಕೃತಕಾಮಿ ಯುವತಿಯೊಬ್ಬಳ ರೂಮ್ ಪ್ರವೇಶಿಸಿ ಆಕೆಯ ಬಟ್ಟೆಯನ್ನು ಟೆರೇಸ್ ಮೇಲೆ ಕೊಂಡೊಯ್ದು ಇಟ್ಟಿದ್ದ. ಇದು ಗಮನಕ್ಕೆ ಬಂದು ಎಲ್ಲ ಯುವತಿಯರು ಹುಡುಕಾಟ ನಡೆಸಿದ್ದು ಈ ವೇಳೆ ಆತ ಟೆರೇಸ್ ಮೇಲೆ ಪತ್ತೆಯಾಗಿದ್ದಾನೆ. ಹಾಗೇ ಸಿಕ್ಕಿದವನಿಗೆ ಯುವತಿಯರೇ ಸೇರಿಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆತ ಅಲ್ಲಿಂದ ಪರಾರಿಯಾಗಿ ನಗರದ ತಾರಾ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದಿದ್ದಾನೆ ಎಂಬ ಮಾಹಿತಿ ಲಭಿಸಿದೆ.
ಕೇರಳ ಮೂಲದ ಆರೋಪಿ ವಿಕೃತ ಚೇಷ್ಟೆಯಿಂದಾಗಿ ಪಿಜಿ ಯುವತಿಯರು ಭಯಬಿದ್ದಿದ್ದಾರೆ. ಈ ಹಿಂದೆ ಎರಡು ಬಾರಿ ಇಂತಹದ್ದೇ ಪ್ರಕರಣ ಜರುಗಿದ್ದರೂ ಪೊಲೀಸರು ಕಠಿಣ ಕ್ರಮ ಜರುಗಿಸದೇ ಇರುವುದು ಮತ್ತೊಮ್ಮೆ ಘಟನೆ ಮರುಕಳಿಸಲು ಕಾರಣ ಎಂದು ಯುವತಿಯರು ದೂರಿದ್ದಾರೆ. ರಾಜ್ಯದಲ್ಲಿ ಬೆಳಕಿಗೆ ಬಂದಿರುವ ಉಮೇಶ್ ರೆಡ್ಡಿ, ಜೈಶಂಕರ್, ಸೈನೆಡ್ ಮೋಹನ್ ನಂಥವರ ವಿಕೃತ ಕೃತ್ಯಗಳು ಜನಮಾನಸದಲ್ಲಿ ಹಸಿರಾಗಿರುವಾಗಲೇ ಪೊಲೀಸರು ಇಂತಹ ಪ್ರಕರಣಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಜನರ ಆಕ್ರೋಶಕ್ಕೂ ಕಾರಣವಾಗಿದೆ. ವಿನಯ್ ಗಾಂವ್ಕರ್ ಅವರಂತಹ ಖಡಕ್ ಅಧಿಕಾರಿಗಳು ಈ ಬಗ್ಗೆ ಗಮನಿಸಿ ಯುವತಿಯರ ರಕ್ಷಣೆಯತ್ತ ಸೂಕ್ತ ಕ್ರಮ ಜರುಗಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

1 thought on “ಮಂಗಳೂರು: ಲೇಡಿಸ್ ಪಿಜಿಯಲ್ಲಿ ಇಣುಕುತ್ತಿದ್ದ ‘ವಿಕೃತಕಾಮಿ’ಗೆ ಯುವತಿಯರಿಂದಲೇ ಧರ್ಮದೇಟು!!

  1. Thank you so much Prakash Sir we are always thankful to you. ಪೊಲೀಸ್ ಸಿಬ್ಬಂದಿಗಳು ಇದನ್ನು ಗಂಭೀರವಾಗಿ ತೆಗೆದುಕೊಳ್ಳಲೇಬೇಕು. ದಯವಿಟ್ಟು ನಿಮ್ಮ ಪ್ರೋತ್ಸಾಹ ಬೇಕು.

Leave a Reply

Your email address will not be published. Required fields are marked *