ಮಂಗಳೂರಿನ ಗ್ರಾಹಕರಿಗೆ `ಟಾಟಾ’ ಹೇಳಿದ `ಯಮಾಹಾ’!

ಮಂಗಳೂರು: ದ್ವಿಚಕ್ರ ವಾಹನ ಸವಾರರ ಅದರಲ್ಲೂ ಯುವಜನತೆಯ ನೆಚ್ಚಿನ ಅಟೋಮೊಬೈಲ್ ಬ್ರಾಂಡ್ ಆಗಿದ್ದ ಯಮಾಹಾ' ಸಂಸ್ಥೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಇದರಿಂದಾಗಿ ಮಂಗಳೂರಿನ ಬಹುತೇಕ ಶೋರೂಂಗಳು ಬಾಗಿಲೆಳೆದುಕೊಂಡಿದ್ದು ನಗರದ ಗ್ರಾಹಕರಿಗೆ ಟಾಟಾ ಮಾಡಿ ಬೇರೆ ಕಡೆ ಸ್ಥಳಾಂತರಗೊಳ್ಳುತ್ತಿವೆ. ನಗರದ ಅಲ್ಲಲ್ಲಿ ಇದ್ದ ಯಮಾಹಾ ಶೋರೂಂಗಳು ಇಂದು ಉಳಿದಿಲ್ಲ. ನೌಕರರ ಸಮಸ್ಯೆ, ಸಂಬಳ ನೀಡಲಾಗದೆ ನಿರ್ವಹಣೆ ಸಮಸ್ಯೆ ಎದುರಾಗಿರುವುದರಿಂದ ಶೋರೂಂಗಳು ಬಂದ್ ಆಗಿವೆ. ಫಳ್ನೀರ್ ನಲ್ಲಿದ್ದ
ಮ್ಯಾಂಗಲೋರ್ ಬೈಕರ್ಸ್’ ಶೋರೂಂ ಕೆಲತಿಂಗಳ ಹಿಂದೆಯೇ ಮುಚ್ಚಿದೆ. ಸ್ಪೋಟ್ರ್ಸ್ ಬೈಕ್ ತಯಾರಿಯಲ್ಲಿ ಹೆಸರುವಾಸಿಯಾಗಿರುವ ಯಮಾಹಾಕ್ಕೆ ಮಾರುಹೋದ ಯುವಜನತೆ ಇಂದು ಹಿಡಿಶಾಪ ಹಾಕುವಂತಾಗಿದೆ. ಆರ್ ಒನ್ ಫೈವ್, ಎಫ್ ಝಿ ಮುಂತಾದ ಸ್ಪೋಟ್ರ್ಸ್ ಮಾಡೆಲ್ ಮಾರುಕಟ್ಟೆಗೆ ಪರಿಚಯಿಸಿರುವ ಯಮಾಹಾಕ್ಕೆ ನಗರದಲ್ಲೇ ಸಾವಿರಾರು ಮಂದಿ ಗ್ರಾಹಕರಿದ್ದಾರೆ. ಇಂದು ನಗರದ ಮಣ್ಣಗುಡ್ಡೆಯಲ್ಲಿನ ಯಮಾಹಾ ಸರ್ವಿಸ್ ಸ್ಟೇಷನ್ ಗೆ ತೆರಳಿದ್ದ ನೂರಾರು ಗ್ರಾಹಕರು ಬಾಗಿಲಿಗೆ ಬೀಗ ಜಡಿದಿದ್ದನ್ನು ಕಂಡು ಕಂಗಾಲಾಗಿದ್ದಾರೆ. ಕೆಲವು ಸಿಬ್ಬಂದಿ ಶೋರೂಂ ಸ್ಥಳಾಂತರ ಮಾಡುತ್ತಿದ್ದರೆ `ಫ್ರೀ ಸರ್ವಿಸ್’ಗೆಂದು ಬಂದಿದ್ದ ಗ್ರಾಹಕರು ಇನ್ನು ಯಾರಿಂದ ಸರ್ವಿಸ್ ಮಾಡಿಸುವುದು ಎಂದು ಗೊಂದಲಕ್ಕೊಳಗಾಗಿದ್ದರು. ಸಂಸ್ಥೆಯ ನಂಬರ್ ಗಳನ್ನು ಸಂಪರ್ಕಿಸಿದರೆ ತೊಕ್ಕೊಟ್ಟಲ್ಲಿ ಒಂದು ಶೋರೂಂ ಇರಬೇಕು, ಬಿಸಿ ರೋಡ್ ನಲ್ಲಿ ಇರಬೇಕು, ಅಲ್ಲಿಗೆ ಹೋಗಿ ಎಂಬ ರೆಡಿಮೇಡ್ ಉತ್ತರ ಸಿಗುತ್ತದೆ ಅಂತಾರೆ ಗ್ರಾಹಕರು. ಮಾನ್ಸೂನ್ ಆಫರ್, ಹಬ್ಬಗಳ ಆಫರ್ ಎಂದು ಗ್ರಾಹಕರನ್ನು ಸೆಳೆದಿದ್ದ ಯಮಾಹಾ ಸಂಸ್ಥೆಯ ದ್ವಿಚಕ್ರ ವಾಹನ ಕೊಂಡವರು ಇನ್ನುಮುಂದೆ ಸರ್ವಿಸ್ ಗಾಗಿ ಊರೂರು ಅಳೆಯಬೇಕಾಗಿರೋದಂತೂ ಸುಳ್ಳಲ್ಲ.