ಭಾರೀ ಮಳೆಗೆ ರಾಜ್ಯದಲ್ಲಿ 13 ಬಲಿ

ಬೆಂಗಳೂರು: ರಾಜ್ಯದಲ್ಲಿ ಭಾರೀ ಮಳೆಗೆ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಆಯುಕ್ತ ಮನೋಜ್ ರಂಜನ್ ಈ ಕುರಿತು ಮಾಹಿತಿ ನೀಡಿದ್ದಾರೆ. ಕಳೆದ ಎರಡು ದಿನಗಳಿಂದ ಎಲ್ಲಾ ಜಲಾಶಯಗಳ ನೀರಿನ ಒಳಹರಿವು ಹಾಗೂ ಹೊರಹರಿವು ಹೆಚ್ಚಾಗಿದೆ. ರಾಜ್ಯದಲ್ಲಿ ಒಟ್ಟು 13 ಮಂದಿ ಮಳೆಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದೊಂದು ವಾರದಿಂದ 13 ಮಂದಿ ಸಾವನ್ನಪ್ಪಿದ್ದಾರೆ. ಮುಂದಿನ 24 ಗಂಟೆಗಳಲ್ಲಿ ಕರ್ನಾಟಕ ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯ ಮುನ್ಸೂಚನೆಯನ್ನು ನೀಡಲಾಗಿದೆ.
ರಾಜ್ಯದ ಕರಾವಳಿ ಪ್ರದೇಶದಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದೆ. ಮಲೆನಾಡು ಭಾಗ ಹಾಗೂ ಉತ್ತರ ಒಳನಾಡಿನಲ್ಲಿ ಕೂಡ ಸಾಧಾರಣ ಮಳೆಯಾಗಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮಾತ್ರ ಗಾಳಿಯಿಂದ ಕೂಡಿದ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೃಷ್ಣರಾಜ ಸಾಗರ, ಹಾರಂಗಿ, ಹೇಮಾವತಿ, ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿದೆ. ಮೈಸೂರಿನ ಹೆಬ್ಬಾಳ ನದಿ ತುಂಬಿ ಹರಿಯುತ್ತಿದೆ. ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಬ್ರಹ್ಮಗಿರಿ ಬೆಟ್ಟ ಕುಸಿದ ಪರಿಣಾಮ ಅರ್ಚಕರ ಮನೆಗಳು ಭೂಕುಸಿತಕ್ಕೆ ತುತ್ತಾಗಿ ನಾಪತ್ತೆಯಾಗಿರುವ ನಾಲ್ವರು ಅರ್ಚಕರಿಗಾಗಿ ಶೋಧಕಾರ್ಯ ಮುಂದುವರಿದಿದೆ.

Leave a Reply

Your email address will not be published. Required fields are marked *