ಬೆಂಗಳೂರು ಗಲಭೆ: ಸ್ವತಂತ್ರ ನ್ಯಾಯಾಂಗ ತನಿಖೆಗೆ ಸಿಪಿಐಎಂ ಒತ್ತಾಯ

ಬೆಂಗಳೂರು: ನಗರದ ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಗಲಭೆ ಪ್ರಕರಣಗಳನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೆ ಒಳಪಡಿಸಲು ಸಿಪಿಐಎಂ ಒತ್ತಾಯಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ಮಹಮದ್ ಕುರಿತ ಕೋಮು ಪ್ರಚೋದಕ ಮತ್ತು ಅವಹೇಳನಕಾರಿ ಪೋಸ್ಟಿಂಗ್ ಮತ್ತು ಆ ವಿಚಾರಕ್ಕೆ ಸಂಬಂಧಿಸಿ ದೂರು ದಾಖಲಿಸುವಲ್ಲಿನ ವಿಳಂಬ ಧೋರಣೆ ಹಿಂಸಾಚಾರಕ್ಕೆ ತಿರುಗಿ ಬೆಂಗಳೂರಿನ ಪುಲಿಕೇಶಿ ನಗರದ ಶಾಸಕರ ಮನೆ ಹಾಗೂ ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆದು ಕೋಟ್ಯಾಂತರ ರೂಗಳ ಆಸ್ತಿ- ಪಾಸ್ತಿಗೆ ಹಾನಿಯಾಗಿದೆ. ಅದೇ ರೀತಿ, ಗೋಲಿಬಾರ್ ನಲ್ಲಿ ಮೂರು ಮಂದಿ ಕೊಲ್ಲಲ್ಪಟ್ಟಿದ್ದಾರೆ. ಒಟ್ಟು ಅಹಿತಕರ ಘಟನೆಗಳನ್ನು ಮತ್ತು ಈ ದುರ್ಘಟನೆಗಳಿಗೆ ಕಾರಣವಾದ ಎಲ್ಲ ಶಕ್ತಿಗಳನ್ನು ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ. ಅವರ ಮೇಲೆ ಕಠಿಣ ಕಾನೂನಿನ ಕ್ರಮಗಳನ್ನು ಜರುಗಿಸುವ ಬೇಕು ಹಾಗೂ ಆ ಪ್ರದೇಶದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಗೆ ಅಗತ್ಯ ಕ್ರಮ ವಹಿಸಬೇಕೆಂದು ಸಿಪಿಐಎಂ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ಸಾಮಾಜಿಕ ಜಾಲತಾಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಸರಕಾರದ ಯಾವುದೇ ನಿಯಂತ್ರಣವಿಲ್ಲದೇ ಇರುವುದರಿಂದ, ಕೋಮು ಪ್ರಚೋಧಕ ಅವಹೇಳನಕಾರಿ ಪೋಸ್ಟಿಂಗ್‍ಗಳು, ದೂಷಣೆಗಳು, ಸ್ವೇಚ್ಛಾಚಾರಗಳು, ಈ ದಿನಗಳಲ್ಲಿ ನಿರಂತರವಾಗಿ ಕಂಡು ಬರುತ್ತಲೇ ಇವೆ. ಇದರಿಂದ ಧಾರ್ಮಿಕ ಮುಖಂಡರು, ಪ್ರವಾದಿಗಳು, ರಾಜಕೀಯ ನಾಯಕರು, ಪ್ರಗತಿಪರ ಸಾಹಿತಿಗಳು ಗಂಭೀರವಾಗಿ ನಿಂದನೆಗೊಳಗಾಗುತ್ತಿದ್ದಾರೆ. ಒಟ್ಟು ಪ್ರಕರಣಗಳನ್ನು ಒಂದು ಸ್ವತಂತ್ರ ನ್ಯಾಯಾಂಗ ತನಿಖೆಗೊಳಪಡಿಸಬೇಕು. ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಲು, ಜನತೆಯ ಆತಂಕವನ್ನು ನಿವಾರಿಸಲು ಅಗತ್ಯ ಕ್ರಮವಹಿಸುವಂತೆ ಭಾರತ ಕಮ್ಯುನಿಸ್ಟ್ ಪಕ್ಷ ರಾಜ್ಯ ಸಮಿತಿ ಕಾರ್ಯದರ್ಶಿ ಯು.ಬಸವರಾಜ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *