`ಬೆಂಗಳೂರು ಗಲಭೆಗೆ ರಾಜ್ಯ ಸರಕಾರದ ವೈಫಲ್ಯ ಕಾರಣ’

ಬೆಂಗಳೂರು: ನಗರದ ಕೆ.ಜೆ.ಹಳ್ಳಿ ಮತ್ತು ಡಿ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ಆಗಸ್ಟ್ 11ರಂದು ನಡೆದ ಘಟನೆಗಳಿಗೆ ಸರ್ಕಾರದ ವೈಫಲ್ಯವೇ ನೇರ ಕಾರಣ. ಗುಪ್ತಚರ ಇಲಾಖೆಯ ವೈಫಲ್ಯ ಇದರಲ್ಲಿ ಎದ್ದು ಕಾಣುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಲಭೆ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಡಿ.ಜೆ.ಹಳ್ಳಿಯ ಘಟನೆಯ ನೈತಿಕ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕು. ಆಡಳಿತ ಕೇಂದ್ರದ ಕೈಯಳತೆ ದೂರದಲ್ಲಿರುವ ಈ ಪ್ರದೇಶದಲ್ಲಾದ ಅನಾಹುತವನ್ನು ನಿಭಾಯಿಸಲು ಆಗಲಿಲ್ಲವೆಂದರೆ ಸರ್ಕಾರ ಯಾಕಿರಬೇಕು ಎಂದು ಪ್ರಶ್ನಿಸಿದ್ದಾರೆ.
ಪ್ರವಾದಿಯವರ ಬಗೆಗೆ ಕೆಟ್ಟ ಚಿತ್ರ ರಚಿಸಿ ನವೀನ್ ಎಂಬ ಹುಡುಗನಿಗೆ ಕೊಟ್ಟವರಾರು? ಆ ಚಿತ್ರಗಳು ಸೋಷಿಯಲ್ ಮೀಡಿಯಾಗಳಿಗೆ ಬಿತ್ತರಿಸಲು ಕಾರಣರಾದವರು ಯಾರ್ಯಾರು? ಇದರ ಹಿಂದೆ ದೊಡ್ಡ ಪಿತೂರಿ ಇದ್ದಂತಿದೆ. ಈ ಕುರಿತು ಸಮರ್ಪಕವಾದ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಶಾಸಕರ ಮನೆಯನ್ನು, ಪೊಲೀಸ್ ಠಾಣೆಯನ್ನು ರಕ್ಷಿಸಿಕೊಳ್ಳಲಾಗದ ಸರ್ಕಾರದಿಂದ ರಾಜ್ಯದ ಜನರಿಗೆ ಯಾವ ರಕ್ಷಣೆಯನ್ನು ನೀಡಲು ಸಾಧ್ಯ? ಇದರ ಜವಾಬ್ದಾರಿಯನ್ನು ಸರ್ಕಾರ ಹೊರುವುದನ್ನು ಬಿಟ್ಟು ತಲೆಕೆಟ್ಟ ಹುಡುಗರ ಮೇಲೆ ಹೊರಿಸಿ ತಮ್ಮ ಸರ್ಕಾರ ಅತ್ಯಂತ ಸಮರ್ಥವಾಗಿದೆ ಎಂದು ಹೇಳುವುದು ಅತ್ಯಂತ ದುಷ್ಟ ಮತ್ತು ನಿರ್ಲಜ್ಜ ರಾಜಕಾರಣದ ಪರಮಾವಧಿಯ ನಿಲುವು ಎಂದು ಟೀಕಿಸಿದ್ದಾರೆ.

Leave a Reply

Your email address will not be published. Required fields are marked *