ಬಿಜೆಪಿ ನಾಯಕರ ಮನೆಗೂ ಬೆಂಕಿ ಬೀಳುತ್ತೆ: ಮುತಾಲಿಕ್

ಧಾರವಾಡ: ಬೆಂಗಳೂರಿನ ಕೆಜೆ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ಗಲಭೆ ನಡೆಸಿದವರನ್ನು ರಾಜ್ಯ ಸರ್ಕಾರ ಕೂಡಲೇ ಬಂಧಿಸಿ, ಜೈಲಿಗೆ ಅಟ್ಟಬೇಕು. ಇಲ್ಲವಾದಲ್ಲಿ ಅವರು ಬಿಜೆಪಿ ನಾಯಕರ ಮನೆಗೆ ಕೂಡ ಬೆಂಕಿ ಹಚ್ಚುತ್ತಾರೆ ಎಂದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕೆಜೆ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ನಡೆದ ಘಟನೆಯನ್ನು ನಾನು ಖಂಡಿಸುತ್ತೇನೆ. ಇದು ಮೊದಲ ಬಾರಿ ಅಲ್ಲ, ಇದು ಕಾಂಗ್ರೆಸ್ಸಿನವರು ಮುಸ್ಲಿಮರನ್ನು ತಲೆ ಮೇಲೆ ಕುರಿಸಿಕೊಂಡಿದ್ದಕ್ಕೆ ಆಗಿರುವಂತದ್ದಾಗಿದೆ. ಈ ಘಟನೆಗೆ ಸಂಬಂಧಿಸಿ ಸೈಬರ್ ಕ್ರೈಂಗೆ ದೂರನ್ನು ಕೊಡಬಹುದಿತ್ತು. ಶಾಸಕರ ಮನೆ ಪೊಲೀಸ್ ಠಾಣೆಯನ್ನು ಸುಡ್ತಿರಲ್ಲ, ಇಲ್ಲಿ ಸಂವಿಧಾನ ಯಾಕೆ ಬೇಕು. ಇದು ತಾಲಿಬಾನಾನಾ ಅಥವಾ ಪಾಕಿಸ್ತಾನನಾ ಎಂದು ಕಿಡಿಕಾರಿದರು. ಸಂವಿಧಾನ ಪ್ರಕಾರ ಹಾಗೂ ಕಾನೂನು ಪ್ರಕಾರ ನಡೆಯಬೇಕು ಎಂದು ಸಾಮಾನ್ಯ ಜ್ಞಾನ ಇಲ್ಲವಾ ನಿಮಗೆ ಎಂದ ಅವರು, ಬಿಜೆಪಿ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲದೇ ಹೋದರೆ ಮುಂದೆ ನಿಮ್ಮ ಮನೆಗೆ ಕೂಡಾ ಬೆಂಕಿ ಬೀಳುತ್ತೆ ಎಂದು ಎಚ್ಚರಿಕೆ ನೀಡಿದರು. ಇದು ಪೂರ್ವ ಯೋಜಿತ ಘಟನೆ, ಇದರ ಹಿಂದೆ ನಿಶ್ಚಿತವಾಗಿ ದೊಡ್ಡ ವ್ಯಕ್ತಿಗಳ ಕೈವಾಡ ಇದ್ದೇ ಇರುತ್ತೆ. ಈ ಹಿಂದೆ ನಮ್ಮ ದೇವರನ್ನು ಅವಹೇಳನ ಮಾಡಿದ್ದಾರೆ. ನಾವು ಅದನ್ನೇ ಮಾಡಬಹುದಲ್ಲ? ಸರ್ಕಾರ ಇವರನ್ನು ಒದ್ದು ಒಳಗೆ ಹಾಕಬೇಕು. ಹೊರಗೆ ಬರದಂತೆ ಮಾಡಬೇಕು ಎಂದು ಅವರು ಹೇಳಿದರು.