ಫೇಸ್ಬುಕ್ ಪೋಸ್ಟ್ ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಮೌಲಾನಾ ಶಾಫಿ ಒತ್ತಾಯ

ಬೆಂಗಳೂರು: ಒಂದು ಸಮುದಾಯದ ವಿರುದ್ಧ ಅವಹೇಳನಕಾರಿ ಬರಹಗಳನ್ನು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೌಲಾನಾ ಶಾಫಿ ಸಾದಿ ಒತ್ತಾಯಿಸಿದ್ದಾರೆ. ಜಗತ್ತಿಗೆ ಮಾನವೀಯತೆ ಮತ್ತು ಸುಸಂಸ್ಕೃತಿಯ ಸಂದೇಶ ನೀಡಿದ ಪೈಗಂಬರ್ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಜಾಗತಿಕ ಮುಸಲ್ಮಾನರ ಹೃದಯ ಸಿಮ್ಹಾಸನದ ರಾಜಕುಮಾರ. ಅವರನ್ನು ನಿಂದನೆ ಮಾಡಿದ ಕಿಡಿಗೇಡಿಗೆ ಗರಿಷ್ಠ ಶಿಕ್ಷೆಯಾಗಲಿ' ಎಂದು ಮೌಲಾನಾ ಶಾಫಿ ಟ್ವೀಟ್ ಮಾಡಿದ್ದಾರೆ. ಕಾನೂನನ್ನು ಕೈಗೆತ್ತಿಕೊಂಡು ಪೋಲೀಸರ ವಿರುಧ್ಧ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡುವುದು ಪ್ರವಾದಿಯ ಹಿಂಬಾಲಕರಾದ ನಮ್ಮ ಶೈಲಿಯಲ್ಲ. ಎಲ್ಲರೂ ಶಾಂತಿ ಕಾಪಾಡಬೇಕು. ಕಾನೂನಾತ್ಮಕ ಹೋರಾಟದಲ್ಲಿ ನಂಬಿಕೆಯುಳ್ಳವರಾಗಬೇಕು’ ಎಂದು ಶಾಫಿ ಸಲಹೆ ನೀಡಿದ್ದಾರೆ. ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸೋದರ ಅಳಿಯ ನವೀನ್ ಅವಹೇಳನಕಾರಿ ಪೋಸ್ಟ್ ಹಾಕಿದ್ದು ಆತನನ್ನು ಈಗಾಗಲೇ ಕಾಡುಗೊಂಡನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಫೇಸ್ಬುಕ್ ನಲ್ಲಿ ಹಾಕಲಾದ ಅವಹೇಳನಕಾರಿ ಪೋಸ್ಟ್ ತಮ್ಮದಲ್ಲ ಎಂದು ಕೆಜಿ ಹಳ್ಳಿ ಪೊಲೀಸರ ವಶದಲ್ಲಿರುವ ನವೀನ್ ಹೇಳಿದ್ದಾರೆ. ಮಂಗಳವಾರ ಸಂಜೆ 4 ಗಂಟೆ ಹೊತ್ತಿಗೆ ಮೊಬೈಲ್ ಕಳೆದುಹೋಗಿ ಆ ಬಳಿಕ ತಮ್ಮ ಖಾತೆಯಲ್ಲಿ ಪೋಸ್ಟ್ ಹಾಕಲಾಗಿದೆ ಎಂದು ಪೊಲೀಸರ ಎದುರು ನವೀನ್ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *