ಪೌಲ್ ಪೋಗ್ಬಾಗೆ ಕೊರೊನಾ ಸೋಂಕು

ಮ್ಯಾನ್ಚೆಸ್ಟರ್: ಮ್ಯಾನ್ಚೆಸ್ಟರ್ ಯುನೈಟೆಡ್ ಫುಟ್ಬಾಲ್ ತಂಡದ ಸ್ಟಾರ್ ಮಿಡ್ಫೀಲ್ಡರ್, ಫ್ರಾನ್ಸ್ ತಂಡದ ಪೌಲ್ ಪೋಗ್ಬಾಗೆ ಕೊರೊನಾವೈರಸ್ ಸೋಂಕು ತಗುಲಿದೆ. ಮುಂದಿನ ಭಾನುವಾರ ನೇಷನ್ಸ್ ಲೀಗ್ನಲ್ಲಿ ಫ್ರಾನ್ಸ್ ಮತ್ತು ಸ್ವೀಡನ್ ತಂಡಗಳಿಗೆ ಪಂದ್ಯವಿದ್ದು, ಆದರೆ ಸೋಂಕಿಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಫ್ರಾನ್ಸ್ ತಂಡ ಪೋಗ್ಬಾ ಅವರನ್ನು ಹೊರಗಿಟ್ಟಿದೆ.
‘ನಾನು ಪಂದ್ಯ ಆರಂಭವಾಗಲಿರುವ ಈ ಕೊನೇ ಕ್ಷಣದಲ್ಲಿ ಆಟಗಾರನನ್ನು ಬದಲಿಸಬೇಕಿದೆ. ಯಾಕೆಂದರೆ ಪೌಲ್ ಪೋಗ್ಬಾಗೆ ಕೊರೊನಾ ಪಾಸಿಟಿವ್ ಬಂದಿದೆ. ಪರೀಕ್ಷೆಗೊಳಗಾಗಿದ್ದ ಪೋಗ್ಬಾ ಫಲಿತಾಂಶ ಪಾಸಿಟಿವ್ ಬಂದಿದೆ,’ ಎಂದು ಫ್ರಾನ್ಸ್ ಮ್ಯಾನೇಜರ್ ಡಿಡಿಯರ್ ಡೆಸ್ಚಾಂಪ್ಸ್ ಎಪಿ ನ್ಯೂಸ್ ಏಜೆನ್ಸಿಗೆ ಮಾಹಿತಿ ನೀಡಿದ್ದಾರೆ. ಫ್ರಾನ್ಸ್ ತಂಡದಲ್ಲಿದ್ದ ಪ್ರಮುಖ ಆಟಗಾರ ಪೋಗ್ಬಾ ಬದಲಿಗೆ 17ರ ಹರೆಯದ ರೆನ್ನೆಸ್ ಫುಟ್ಬಾಲರ್ ಎಡ್ವರ್ಡೊ ಕ್ಯಾಮವಿಂಗೊ ಅವರನ್ನು ಕರೆತರಲಾಗಿದೆ. ಭಾನುವಾರ ಸ್ವೀಡನ್ ಎದುರಿಸಿದ ಮೂರು ದಿನಗಳ ಬಳಿಕ ಫ್ರಾನ್ಸ್ ತಂಡ ಕ್ರೊವೇಷಿಯಾಕ್ಕೆ ಆತಿಥ್ಯ ವಹಿಸಲಿದೆ. ಸದ್ಯ ಪೋಗ್ಬಾ ಫ್ರಾನ್ಸ್ ತಂಡದಿಂದ ಹೊರಬಿದ್ದಿರುವುದು ತಂಡಕ್ಕೆ ದೊಡ್ಡ ಆಘಾತ ಎಂದರೆ ತಪ್ಪಾಗಲರಾರದು. ಯಾಕೆಂದರೆ ಪೋಗ್ಬಾ ಯುವ ಆಟಗಾರನಾದರೂ ಯಾವುದೇ ಕ್ಷಣದಲ್ಲಿ ಎದುರಾಳಿ ತಂಡದ ಮೇಲೆ ಮುಗಿಬಿದ್ದು, ಒತ್ತಡ ಹಾಕಬಲ್ಲ ತಾಕತ್ತು ಹೊಂದಿದ್ದಾರೆ. ಇದು ಸಹಜವಾಗಿಯೇ ಫ್ರಾನ್ಸ್ಗೆ ಹಿನ್ನಡೆ ತಂದಿದೆ.