ಪತ್ರಕರ್ತ ಅರ್ನಬ್ ವಿರುದ್ಧ ಸಮರ ಸಾರಿದ ಆರ್ಜಿವಿ!

ಮುಂಬೈ: ತೆಲುಗಿನ ಪವನ್ ಕಲ್ಯಾಣ್ ಕುರಿತು ಸಿನೆಮಾ ಮಾಡುವ ಮೂಲಕ ವಿವಾದ ಮೂಡಿಸಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (ಆರ್ಜಿವಿ), ಇದೀಗ ಪತ್ರಕರ್ತ, ನಿರೂಪಕ ಅರ್ನಬ್ ಗೋಸ್ವಾಮಿ ವಿರುದ್ಧ ಸಿನೆಮಾ ಮಾಡುವುದಾಗಿ ಘೋಷಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಸುಶಾಂತ್ ಸಿಂಗ್ ರಾಜ್ಪೂತ್ ಸಾವಿನ ಪ್ರಕರಣದಲ್ಲಿ ಬಾಲಿವುಡ್ ವಿರುದ್ಧ ಅರ್ನಬ್ ಗೋಸ್ವಾಮಿ ಸತತ ವಾಗ್ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ವರ್ಮಾ ಈ ಕೆಲಸಕ್ಕೆ ಮುಂದಾಗಿದ್ದಾರೆ.
ಚಿತ್ರಕ್ಕೆ ‘ಅರ್ನಬ್- ದಿ ನ್ಯೂಸ್ ಪ್ರಾಸ್ಟಿಟ್ಯೂಟ್’ ಎಂದು ಹೆಸರಿಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವರ್ಮಾ, ಬಾಲಿವುಡ್ ಬಗ್ಗೆ ಇಷ್ಟು ಕೆಟ್ಟದಾಗಿ ಅರ್ನಬ್ ಗೋಸ್ವಾಮಿ ಮಾತನಾಡುತ್ತಿರುವುದನ್ನು ಕಂಡು ಆಘಾತವಾಯ್ತು. ಇದು ಅತ್ಯಂತ ಕೊಳಕು ಉದ್ಯಮ, ಇದಕ್ಕೆ ಅಪರಾಧಿಗಳು, ಅತ್ಯಾಚಾರಿಗಳು, ಗ್ಯಾಂಗ್ಸ್ಟರ್ಗಳು, ಲೈಂಗಿಕ ಶೋಷಕರ ನಂಟು ಇದೆ ಎಂದು ಆರೋಪಿಸಿದ್ದಾರೆ. ದಿವ್ಯ ಭಾರತಿ, ಜಿಯಾ ಖಾನ್, ಶ್ರೀದೇವಿ ಮತ್ತು ಸುಶಾಂತ್ ಅವರ ಸಾವುಗಳನ್ನು ಒಂದೆಡೆ ಸೇರಿಸಿ ಬಾಲಿವುಡ್ ಕೊಲೆಗಾರ ಎಂದು ಬಿಂಬಿಸುತ್ತಿರುವುದು ಎಷ್ಟು ದಡ್ಡತನದ ಕೆಲಸ. ವಾಸ್ತವವಾಗಿ ಈ ನಾಲ್ಕು ಸಾವುಗಳು 25 ವರ್ಷದ ಅಂತರದಲ್ಲಿ ಸಂಭವಿಸಿವೆ. ದಿವ್ಯಾ, ಜಿಯಾ, ಶ್ರೀದೇವಿ ಮತ್ತು ಸುಶಾಂತ್ ಅವರ ನಾಲ್ಕೂ ಪ್ರಕರಣಗಳಲ್ಲಿ ಸಂಪೂರ್ಣ ಬೇರೆ ಬೇರೆ ವ್ಯಕ್ತಿಗಳು ಮತ್ತು ಸಂದರ್ಭಗಳಿವೆ. ಆದರೆ ಅರ್ನಬ್ ತಲೆ ಪ್ರಕಾರ ಎಲ್ಲರೂ ಒಂದೇ ಮತ್ತು ಬಾಲಿವುಡ್ ಎಂಬ ಸಂಸ್ಥೆಯಿಂದಲೇ ಕೊಲೆಯಾಗಿದ್ದಾರೆ. ನಮ್ಮ ಬಹು ಚಾಣಾಕ್ಷ ಅರ್ನಬ್ ಗೋಸ್ವಾಮಿಗೆ ನನ್ನ ಪ್ರಶ್ನೆ, ಬಾಲಿವುಡ್ ಒಂದು ಸ್ಮಶಾನದಲ್ಲಿನ ಸಮಾಧಿಯಲ್ಲಿ ಮಲಗಿರುವ ಕೆಟ್ಟ ಕೊಂತಿಯಾಗಿ, ತನಗೆ ರಕ್ತದಾಹವಾದಾಗಲೆಲ್ಲಾ ಡ್ರ್ಯಾಕುಲಾದಂತೆ ಎದ್ದು ಬರುತ್ತಲೇ ಇರುತ್ತದೆಯೇ? ಎಂದು ಪ್ರಶ್ನಿಸಿರುವ ವರ್ಮಾ, ಬಾಲಿವುಡ್ ಮೇಲೆ ಸತತ ದಾಳಿ ನಡೆಯುತ್ತಿದ್ದರೂ ಮೌನ ವಹಿಸಿರುವ ಆದಿತ್ಯ ಚೋಪ್ರಾ, ಕರಣ್ ಜೋಹರ್, ಮಹೇಶ್ ಭಟ್, ಶಾರುಖ್ ಖಾನ್, ಸಲ್ಮಾನ್ ಖಾನ್ ವಿರುದ್ಧ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅರ್ನಬ್ ಗೋಸ್ವಾಮಿ ಬೊಗಳಿದ್ದಕ್ಕೆ ಹೆದರಿ ನಿಮ್ಮ ದುಬಾರಿ ಆಫೀಸ್ಗಳ ಟೇಬಲ್ ಅಡಿ ಅಡಗಿ ಕುಳಿತಿದ್ದೀರಾ? ಎಂದು ಆರ್ಜಿವಿ ಬಾಲಿವುಡ್ ಮಂದಿಯನ್ನು ಪ್ರಶ್ನಿಸಿದ್ದಾರೆ. ನೀವುಗಳು ಆತನ (ಅರ್ನಬ್) ವಿರುದ್ಧ ಮಾತನಾಡಲು ಹೆದರಿದರೆ ಈಗಿನ ಸಾರ್ವಜನಿಕರ ಭಾವನೆಗಳು ನಿಮ್ಮ ವಿರುದ್ಧವೇ ಹೋಗುತ್ತದೆ. ಆ ಭಾವನೆಗಳನ್ನು ಎಬ್ಬಿಸಿರುವುದು ಅರ್ನಬ್. ನಿಮ್ಮೆಲ್ಲರ ಮೌನ ನೀವು ತಪ್ಪಿತಸ್ಥರು ಎಂಬ ಭಾವನೆ ಮೂಡಿಸುವುದು ಸತ್ಯ. ಈ ಕಾರಣಕ್ಕಾಗಿಯೇ ನಾನು ಅರ್ನಬ್ ಗೋಸ್ವಾಮಿ ಕುರಿತು ಸಿನಿಮಾ ಮಾಡಲು ನಿರ್ಧರಿಸಿದ್ದೇನೆ. ಅವರ ಮುಖವಾಡದ ಬಟ್ಟೆಯನ್ನು ಕಳಚಿ ಅವರ ಸವಿಸ್ತಾರ ಭ್ರಷ್ಟ ಸಂಗತಿಗಳ ಆಳ ಅಗಲಗಳನ್ನು ಬೆತ್ತಲು ಮಾಡುತ್ತೇನೆ. ನನ್ನ ಚಿತ್ರಕ್ಕೆ ‘ಅರ್ನಬ್- ದಿ ನ್ಯೂಸ್ ಪ್ರಾಸ್ಟಿಟ್ಯೂಟ್’ ಎಂಬ ಶೀರ್ಷಿಕೆ ಇರಿಸಿದ್ದೇನೆ. ಆತನ ಬಗ್ಗೆ ಸತತ ಅಧ್ಯಯನ ಮಾಡಿದ ನಂತರ ಈ ಚಿತ್ರಕ್ಕೆ ‘ನ್ಯೂಸ್ ಪಿಂಪ್’ ಅಥವಾ ‘ದಿ ನ್ಯೂಸ್ ಪ್ರಾಸ್ಟಿಟ್ಯೂಟ್’ ಎಂಬ ಟ್ಯಾಗ್ ಲೈನ್ ಇಡಲು ಯೋಚಿಸಿದ್ದೆ. ಎರಡೂ ಸೂಕ್ತವೇ ಆದರೂ ಪ್ರಾಸ್ಟಿಟ್ಯೂಟ್ನ ಶಬ್ಧವೇ ಸೂಕ್ತ ಎನಿಸಿತು ಎಂದು ಆರ್ಜಿವಿ ಹೇಳಿದ್ದಾರೆ.