ನಾರೈನ್ ಆಲ್ರೌಂಡಿಂಗ್ ಆಟ: ಟ್ರಿನ್ಬ್ಯಾಗೊಗೆ ಜಯ

ತರೌಬಾ: ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಸುನಿಲ್ ನಾರೈನ್ ಪ್ರದರ್ಶಿಸಿದ ಅಮೋಘ ಆಲ್ರೌಂಡಿಂಗ್ ನಿರ್ವಹಣೆಗೆ ನೆರವಿನಿಂದ ಇಲ್ಲಿ ನಡೆದ ಕೆರೇಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್)ನ ಉದ್ಘಾಟನಾ ಪಂದ್ಯದಲ್ಲಿ ಗಯಾನ ಅಮೆಜಾನ್ ವಾರಿಯರ್ಸ್ ವಿರುದ್ಧ ಟ್ರಿನ್ಬ್ಯಾಗೊ ನೈಟ್ರೈಡರ್ಸ್ ನಾಲ್ಕು ವಿಕೆಟ್ಗಳ ಜಯ ಸಾಧಿಸಿ, ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಮಳೆಯ ಕಾರಣ ಪಂದ್ಯ ತಡವಾಗಿ ಆರಂಭವಾಗಿತ್ತು. ಈ ಹಿನ್ನೆಲೆಯಲ್ಲಿ ಪಂದ್ಯವನ್ನು ೧೭ ಓವರ್ಗಳಿಗೆ ನಿಗದಿಪಡಿಸಲಾಯಿತು. ಈ ವೇಳೆ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಗಯಾನ ತೀರಾ ನೀರಸ ಆರಂಭ ಪಡೆಯಿತು. ಆರಂಭಿಕರಾದ ಹೇಮ್ರಾಜ್ ಚಂದ್ರಪಾಲ್ (೩) ಹಾಗೂ ಬ್ರೆಂಡನ್ ಕಿಂಗ್ (೦) ನಿರಾಶೆ ಮೂಡಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಶಿಮ್ರೊನ್ ಹೆಟ್ಮಾಯೆರ್ ಹಾಗೂ ರಾಸ್ ಟೇಲರ್ ಪ್ರದರ್ಶಿಸಿದ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ತಂಡ ಚೇತರಿಕೆ ಜೊತೆಗೆ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಸಾಧ್ಯವಾಯಿತು. ಅಂತಿಮವಾಗಿ ತಂಡ ನಿಗದಿತ ೧೭ ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ೧೪೪ ರನ್ ಪೇರಿಸಿತು. ಹೆಟ್ಮಾಯೆರ್ ೪೪ ಎಸೆತಗಳಲ್ಲಿ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ ಅಜೇಯ ೬೩ ರನ್ ಗಳಿಸಿದರೆ ಅತ್ತ ಟೇಲರ್ ವೇಗದ ೩೩ ರನ್ ಪೇರಿಸಿದರು. ಅತ್ತ ಟ್ರಿನ್ಬ್ಯಾಗೊ ಪರ ಶಿಸ್ತುಬದ್ಧ ಬೌಲಿಂಗ್ ನಡೆಸಿದ ನಾರೈನ್ ತನ್ನ ನಾಲ್ಕು ಓವರ್ಗಳಲ್ಲಿ ಕೇವಲ ೧೯ ರನ್ ನೀಡಿ ಎರಡು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಟ್ರಿನ್ಬ್ಯಾಗೊಗೆ ನಾರೈನ್ ಅಮೋಘ ಆರಂಭ ನೀಡಿದರು. ನಾರೈನ್ ಕೇವಲ ೨೮ ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ ೫೦ ರನ್ ಗಳಿಸುವ ಮೂಲಕ ತಂಡವನ್ನು ಬಹುತೇಕ ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದರು. ಮಧ್ಯಮ ಕ್ರಮಾಂಕದಲ್ಲಿ ಡ್ವೇಯ್ನ್ ಬ್ರಾವೊ ಜವಾಬ್ದಾರಿಯುತ ೩೦ ರನ್ ಗಳಿಸಿದ್ದು, ತಂಡಕ್ಕೆ ನೆರವಾಯಿತು. ಅಂತಿಮವಾಗಿ ತಂಡ ೧೬.೪ ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ೧೪೭ ರನ್ ಗಳಿಸಿ ಜಯ ಸಾಧಿಸಿತು. ಅಮೆಜಾನ್ ಪರ ಇಮ್ರಾನ್ ತಾಹೀರ್ ಹಾಗೂ ನವೀನ್ ಉಲ್ ಹಕ್ ತಲಾ ಎರಡು ವಿಕೆಟ್ ಪಡೆದರು.