ನಾಯ್ಕಾಪು ಹರೀಶ್ ಮರ್ಡರ್: ಇಬ್ಬರು ಹಂತಕರು ಸುಸೈಡ್! ಪ್ರಮುಖ ಆರೋಪಿಗೆ ಕಸ್ಟಡಿ!

ಕಾಸರಗೋಡು: ಕುಂಬಳೆ ನಾಯ್ಕಾಪಿನ ಭಗವತಿ ಆಯಿಲ್ ಎಂಡ್ ಫ್ಲೋರ್ ಮಿಲ್ ನೌಕರನಾಗಿದ್ದ ನಾಯ್ಕಾಪು ಐ.ಸಿ. ರಸ್ತೆ ನಿವಾಸಿ ಹರೀಶ(38) ಎಂಬವರನ್ನು ಬರ್ಬರವಾಗಿ ಕಡಿದು ಕೊಲೆಗೈದ ಪ್ರಕರಣದ ತನಿಖೆಯು ನಿರ್ಣಾಯಕ ಹಂತಕ್ಕೆ ತಲುಪಿದ್ದು, ಪ್ರಕರಣದ ಪ್ರಮುಖ ಹಾಗೂ ಒಂದನೇ ಆರೋಪಿಯನ್ನು ಸೆರೆಹಿಡಿಯಲಾಗಿದೆ. ಹರೀಶರ ಸಂಸ್ಥೆಯಲ್ಲೇ ಇರುವ ಸಹ ನೌಕರ, ಕುಂಬಳೆ ಶ್ರೀ ಗೋಪಾಲಕೃಷ್ಣ ಸಭಾಭವನ ಸಮೀಪದ ನಿವಾಸಿ ಶರತ್ ಯಾನೆ ಶ್ರೀಕುಮಾರ್(25) ಬಂಧಿತ ಆರೋಪಿ. ಕುಂಬಳೆ ವೃತ್ತ ನಿರೀಕ್ಷಕ ಪಿ. ಪ್ರಮೋದ್, ಉಪ ನಿರೀಕ್ಷಕ ಸಂತೋಷ್ ನೇತೃತ್ವದ ಪೊಲೀಸ್ ತಂಡವು ನಿನ್ನೆ ಮಧ್ಯಾಹ್ನ ಈತನನ್ನು ಸೆರೆ ಹಿಡಿದಿದೆ. ಆರೋಪಿಯನ್ನು ವಿಸ್ತøತ ವಿಚಾರಣೆಗೆ ಗುರಿಪಡಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಎರಡು ವಾರಗಳ ರಿಮಾಂಡ್ ವಿಧಿಸಲಾಗಿದೆ. ಈತನನ್ನು ಮತ್ತೆ ವಿಚಾರಣೆ ನಡೆಸಲು ತಮ್ಮ ವಶಕ್ಕೆ ಬಿಟ್ಟುಕೊಡುವಂತೆ ಕೋರಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ.
ಪ್ರಕರಣದ ಹಿನ್ನೆಲೆ:
ಮುಖ್ಯ ಆರೋಪಿ, ಸೂತ್ರಧಾರ ಶ್ರೀಕುಮಾರನ ಬಂಧನದೊಂದಿಗೆ ಹರೀಶ ಹತ್ಯೆಯ ರಹಸ್ಯದ ಗಂಟು ಒಂದೊಂದಾಗಿ ಸುರುಳಿ ಬಿಚ್ಚತೊಡಗಿದೆ. ಕೊಲೆಯ ಮರುದಿನ ಕುಂಬಳೆ ಗೋಪಾಲಕೃಷ್ಣ ಸಭಾಭವನದ ಹಿಂಭಾಗದ ಶೇಡಿಗುಮ್ಮೆ ಕಾಡಿನಲ್ಲಿ ಮರಕ್ಕೆ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಇಬ್ಬರು ಯುವಕರು ಕೂಡಾ ಸದ್ರಿ ಕೃತ್ಯದಲ್ಲಿ ಶಾಮೀಲಾದವರಾಗಿದ್ದಾರೆಂದೂ ಹತ್ಯೆಯಲ್ಲಿ ಒಟ್ಟು ನಾಲ್ವರಿದ್ದರೆಂದೂ ದೃಢಪಟ್ಟಿದೆ. ಇನ್ನೋರ್ವನಿಗಾಗಿ ಬಲೆ ಬೀಸಲಾಗಿದೆ. ಗೋಪಾಲಕೃಷ್ಠ ಸಭಾಭವನ ಸಮೀಪದ ಕಾಲನಿ ನಿವಾಸಿಗಳಾದ ಮಣಿ ಯಾನೆ ಮಣಿಕಂಠ(21) ಹಾಗೂ ರೋಶನ್(20) ಎಂಬವರ ಮೃತದೇಹಗಳು ನಿನ್ನೆ ಸಂಜೆ ಶೇಡಿಗುಮ್ಮೆ ಕಾಡಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದುವು. ಇವರ ದೇಹಗಳಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು, ಇದು ಪೊಲೀಸರಲ್ಲಿ ಶಂಕೆ ಮೂಡಿಸಿತ್ತು. ಸದ್ರಿ ಕೊಲೆಯಲ್ಲಿ ಆತ್ಮಹತ್ಯೆ ನಡೆಸಿದ ಯುವಕರ ಕೈವಾಡ ಬಗ್ಗೆ ಸಂಶಯ ಬಲಗೊಂಡು ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಂತೆ ಮುಖ್ಯ ಆರೋಪಿ ಶ್ರೀಕುಮಾರ್ ಪೊಲೀಸ್ ಬಲೆಗೆ ಬಿದ್ದಿದ್ದ. ಈತನ ಬಂಧನದೊಂದಿಗೆ ಎಲ್ಲ ನಾಲ್ವರು ಅರೋಪಿಗಳನ್ನೂ ಗುರುತಿಸಲಾಯಿತು.
ನಾಯ್ಕಾಪು ಐ.ಸಿ. ರಸ್ತೆ ಸಮೀಪದ ನಿವಾಸಿಯಾಗಿರುವ ದಿ. ಮಾಧವ – ಶೀಲಾ ದಂಪತಿಯ ಪುತ್ರ ಹರೀಶ ಎಂಬವರನ್ನು ಸೋಮವಾರ ಸಾಯಂಕಾಲ ದುಷ್ಕರ್ಮಿಗಳು ಕಡಿದು ಕೊಲೆಗೈದಿದ್ದರು. ತಡರಾತ್ರಿ ಬೈಕಿನಲ್ಲಿ ಮನೆಗೆ ಮರಳುತ್ತಿದ್ದಾಗ ಹರೀಶರ ಮನೆಯ ಕೂಗಳತೆಯ ದೂರದಲ್ಲೇ ಕವಲು ದಾರಿಯ ನಿರ್ಜನ ಪ್ರದೇಶದಲ್ಲಿ ಹೊಂಚು ಹಾಕಿ ಕಾದು ಕುಳಿತಿದ್ದ ಹಂತಕರು ಆಕ್ರಮಣವೆಸಗಿದ್ದರು. ಕುತ್ತಿಗೆ ಹಾಗೂ ತಲೆಯ ಹಿಂಭಾಗಕ್ಕೆ ಬಿದ್ದ ಇರಿತದಿಂದ ಕುಸಿದು ಬಿದ್ದ ಹರೀಶರನ್ನು ಯದ್ವಾತದ್ವಾ ಕಡಿದು ಮರಣ ಖಾತ್ರಿಗೊಳಿಸಿದ ತಂಡ ಪರಾರಿಯಾಗಿತ್ತು. ರಾತ್ರಿ 11.40ರ ವೇಳೆಗೆ ಈ ದಾರಿಯಿಂದ ಬಂದಿದ್ದ ಯಾರೋ ಕಂಡು ನಾಗರಿಕರಿಗೆ ಮಾಹಿತಿ ನೀಡಿದ ಫಲವಾಗಿ ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲಿ ಮರಣ ಸಂಭವಿಸಿತ್ತು. ಹತ್ಯೆಯಾದ ಹರೀಶರು ನಾಯ್ಕಾಪು ಭಗವತೀ ಮಿಲ್ಲಿನಲ್ಲಿ ಕಳೆದ 15 ವರ್ಷಗಳಿಂದ ಚಾಲಕನಾಗಿಯೂ, ಮಾಲಕರ ಆಪ್ತ ಸಹಾಯಕನಾಗಿಯೂ ದುಡಿಯುತ್ತಿದ್ದರು. ಈ ನಡುವೆ ಕಳೆದ ಒಂದು ವರ್ಷ ಹಿಂದಷ್ಟೇ ಆರೋಪಿ ಶ್ರೀಕುಮಾರ್ ಇಲ್ಲಿ ಚಾಲಕನಾಗಿ ಸೇರಿಕೊಂಡಿದ್ದ. ಆ ಬಳಿಕ ಇವರಿಬ್ಬರ ನಡುವೆ ವೈಮನಸ್ಸು ಇತ್ತೆನ್ನಲಾಗಿದೆ. ಸಾಮಗ್ರಿ ಲೋಡ್ ಇಳಿಸುವ ವಿಚಾರದ ವಿವಾದದಂತೆ ಶ್ರೀಕುಮಾರನ ನೇತೃತ್ವದಲ್ಲಿ ಕಳೆದ ವಾರ ಹರೀಶರನ್ನು ಥಳಿಸಲಾಗಿತ್ತು ಎನ್ನಲಾಗಿದೆ. ಆ ಬಳಿಕವೂ ದ್ವೇಷ ಕಟ್ಟಿಕೊಂಡಿದ್ದ ಶ್ರೀಕುಮಾರನು ಕೊನೆಗೆ ಸಹೋದ್ಯೋಗಿಯನ್ನೇ ಮುಗಿಸಿದ್ದ. ಲೋಡ್ ಇಳಿಸುವ ವಿವಾದವಷ್ಟೇ ಕಾರಣವೆಂದು ಸದ್ಯಕ್ಕೆ ನಂಬಲಾಗಿದೆ. ಆದರೆ, ಈ ಬಗ್ಗೆ ಪೊಲೀಸರು ಮತ್ತಷ್ಟು ಕೂಲಂಕುಷ ತನಿಖೆ ನಡೆಸುತ್ತಿದ್ದಾರೆ.
ಸೋಮವಾರ ರಾತ್ರಿ ಎಂಟು ಗಂಟೆಯ ವೇಳೆಗೆ ಮಣಿಕಂಠ ಹಾಗೂ ರೋಶನ್ ಮನೆಗೆ ಬಂದ ಶ್ರೀಕುಮಾರ ಮರಳು ಸಾಗಾಟದ ಕೆಲಸವಿದೆಯೆಂದು ನಂಬಿಸಿ ಅವರನ್ನು ಹಾಗೂ ಮತ್ತೋರ್ವ ಯುವಕನನ್ನು ಕರೆದೊಯ್ದಿದ್ದ. ಆ ಬಳಿಕ ಯುವಕರಿಗೆ ಕಂಠಪೂರ್ತಿ ಮದ್ಯ ಕುಡಿಸಿದ ಬಳಿಕ ಹತ್ಯೆ ನಡೆಸುವ ಬಗ್ಗೆ ವಿವರಿಸಿದ್ದ. ಮದ್ಯದ ನಶೆಯಲ್ಲಿ ತೇಲಾಡುತ್ತಿದ್ದ ಯುವಕರು ಶ್ರೀಕುಮಾರನ ಜೊತೆಸೇರಿ ಆತನ ವಾಹನದಲ್ಲಿ ಕೃತ್ಯ ಸ್ಥಳವಾದ ನಾಯ್ಕಾಪಿನ ನಿರ್ಜನ ಪ್ರದೇಶಕ್ಕೆ ಬಂದಿದ್ದರು. 10.40ಕ್ಕೆ ಸರಿಯಾಗಿ ಹರೀಶ ಮನೆಗೆ ಮರಳಲು ಆ ದಾರಿಯಾಗಿ ಬೈಕಿನಲ್ಲಿ ಬರುತ್ತಿದ್ದಂತೆ ಏಕಾಏಕಿ ಮುಗಿಬಿದ್ದಿದ್ದರು. ಕೃತ್ಯ ಬಳಿಕ ಮೂವರನ್ನೂ ಗೋಪಾಲಕೃಷ್ಣ ಸಭಾಭವನದ ಸಮೀಪ ಇಳಿಸಿ ಶ್ರೀಕುಮಾರ ತೆರಳಿದ್ದ. ಮೂವರ ಪೈಕಿ ಮತ್ತೋರ್ವ ಅಲ್ಲಿಂದ ತೆರಳಿದರೂ ಮಣಿ ಹಾಗೂ ರೋಶನ್ ಬಹಳ ಹೊತ್ತು ರಸ್ತೆ ಬದಿಯಲ್ಲೇ ಕಳೆದಿದ್ದರು. ಮದ್ಯದ ನಶೆ ಸಂಪೂರ್ಣ ಇಳಿದಾಗ ತಾವು ಘೋರ ಅಪರಾಧ ಎಸಗಿರುವುದು ಮನವರಿಕೆಯಾಯಿತು. ತಿದ್ದಲಾರದ ಅಪಚಾರವೆಸಗಿದೆವೆಂಬ ಮನವರಿಕೆ ಹಾಗೂ ತಾವು ಬಂಧನಕ್ಕೊಳಗಾಗುವುದು ಖಚಿತವೆಂಬ ಅರಿವು ಬಂದಾಗ ಅಲ್ಲಿಂದ ನೇರ ಶೇಡಿಗುಮ್ಮೆ ಕಾಡಿನೊಳಗೆ ಪ್ರವೇಶಿಸಿ ಮರಕ್ಕೆ ನೇಣುಬಿಗಿದು ಬದುಕಿಗೆ ವಿದಾಯ ಹಾಡಿದ್ದರು. ಕ್ಷುಲ್ಲಕ ಕಾರಣಕ್ಕೆ ಮೂರು ಅಮಾಯಕ ಜೀವಗಳು ಬಲಿಯಾಗುವಂತಾಗಿದೆ. ಪೊಲೀಸು ತನಿಖೆ ಮುಂದುವರಿಯುತ್ತಿದೆ. ಹರೀಶರು ಇದೇ ಕಳೆದ ಫೆಬ್ರವರಿ 12 ರಂದು ವಿವಾಹಿತರಾಗಿದ್ದರು. ಅವರ ಪತ್ನಿ ಐದು ತಿಂಗಳ ಗರ್ಭಿಣಿಯಾಗಿದ್ದಾರೆ.

Leave a Reply

Your email address will not be published. Required fields are marked *