ನಾಯಿಗಳನ್ನು ಮಾಂಸ ಖಾದ್ಯವಾಗಿ ಬಳಸಲು ಉ.ಕೊರಿಯಾ ಅಧ್ಯಕ್ಷ ಆದೇಶ!

ಉ.ಕೊರಿಯಾ: ಕೊರೊನಾ ವೈರಸ್ ಸೋಂಕಿನಿಂದಾಗಿ ಕೊರಿಯಾದಲ್ಲಿ ಆಹಾರ ಸಮಸ್ಯೆ ಎದುರಾಗಿದ್ದು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಜನರು ತಮ್ಮ ಪ್ರೀತಿಯ ನಾಯಿಗಳನ್ನು ರೆಸ್ಟೋರೆಂಟ್ ಗಳಿಗೆ ನೀಡಬೇಕು, ಅಲ್ಲಿ ನಾಯಿ ಮಾಂಸದ ಖಾದ್ಯ ತಯಾರಿಸಬಹುದು ಎಂದು ಆದೇಶ ನೀಡಿರುವುದಾಗಿ ವರದಿಯಾಗಿದೆ. ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾದ ವಿವಿಧ ಭಾಗಗಳಲ್ಲಿ ನಾಯಿ ಮಾಂಸ ಜನಪ್ರಿಯ ಖಾದ್ಯವಾಗಿದೆ. ಆದರೆ ಮನೆಯಲ್ಲಿ ಸಾಕಿದ ಮುದ್ದಿನ ನಾಯಿಯನ್ನು ಆಹಾರ ಖಾದ್ಯಕ್ಕೆ ಬಳಸಬಹುದೆನ್ನುವ ಆದೇಶ ಜನರ ಆತಂಕಕ್ಕೆ ಕಾರಣವಾಗಿದೆ.
ಉತ್ತರ ಕೊರಿಯಾದಲ್ಲಿ ಆಹಾರ ಪೂರೈಕೆಯ ಕೊರತೆ ಉದ್ಭವಿಸಿದೆ. 1980ರಿಂದಲೂ ಸಾಕು ನಾಯಿಗಳ ಮೇಲಿನ ನಿಷೇಧ ಜಾರಿಯಲ್ಲಿದೆ. ಕೊರೊನಾ ವೈರಸ್ ಕಾರಣದಿಂದ ಉತ್ತರ ಕೊರಿಯಾ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಚೀನಾದೊಂದಿಗಿನ ಶೇ 90ರಷ್ಟು ವ್ಯಾಪಾರ ವಹಿವಾಟು ಬಿದ್ದುಹೋಗಿದೆ. ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಅಲ್ಲಿನ ಅನೇಕ ಕುಟುಂಬಗಳು ಹಸಿವಿನಿಂದ ನರಳುತ್ತಿವೆ ಎಂದು ವಿಶ್ವಸಂಸ್ಥೆ ಕೆಲವು ದಿನಗಳ ಹಿಂದೆ ಹೇಳಿತ್ತು. ರಾಜಧಾನಿ ಪಿಯಾಂಗ್‍ಯಾಂಗ್‍ನಲ್ಲಿ ನಾಯಿಗಳನ್ನು ಮಾಲೀಕರಿಂದ ವಶಪಡಿಸಿಕೊಳ್ಳುವ ಕಾರ್ಯ ಆರಂಭವಾಗಿದೆ. ಕೆಲವು ನಾಯಿಗಳನ್ನು ಸರ್ಕಾರ ಸ್ವಾಮ್ಯದ ಝೂಗಳಿಗೆ ರವಾನಿಸಲಾಗಿದೆ. ಇನ್ನು ಉಳಿದವುಗಳನ್ನು ಮಾಂಸಕ್ಕಾಗಿ ರೆಸ್ಟೋರೆಂಟ್‍ಗಳಿಗೆ ಕೊಡಲಾಗಿದೆ. ಉತ್ತರ ಕೊರಿಯಾದಲ್ಲಿ ನಾಯಿಗಳನ್ನು ಸಾಕುತ್ತಿರುವ ಮನೆಗಳನ್ನು ಗುರುತಿಸಲು ಅಧಿಕಾರಿಗಳನ್ನು ನೇಮಿಸಲಾಗಿದೆ. ನಾಯಿ ಸಾಕಿರುವ ಮನೆಯವರು ಅವುಗಳನ್ನು ಹೊರಗೆ ಬಿಡಬೇಕು ಅಥವಾ ಝೂ ಮತ್ತು ರೆಸ್ಟೋರೆಂಟ್‍ಗಳಿಗೆ ನೀಡಬೇಕು ಎಂದು ಬಲವಂತಪಡಿಸಲಾಗುತ್ತಿದೆ.

Leave a Reply

Your email address will not be published. Required fields are marked *