ನಕಲಿ ಚಿನ್ನ ನೀಡಿ ವಂಚಿಸಿದ್ದ ಕುಖ್ಯಾತ ಖದೀಮರು ಅಂದರ್!

ಮೈಸೂರು: ಪುರಾತನ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸವುಳ್ಳ ವ್ಯಕ್ತಿಯೊಬ್ಬರಿಗೆ ಪುರಾತನ ಕಾಲದ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಹೇಳಿ ನಕಲಿ ಚಿನ್ನದ ಗುಂಡುಗಳನ್ನು ನೀಡಿ 30 ಲಕ್ಷ ರೂ. ಹಣ ಪಡೆದು ವಂಚಿಸಿದ್ದ ಇಬ್ಬರು ಕುಖ್ಯಾತ ಖದೀಮರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಕೆಆರ್ ಎಸ್ ನಿವಾಸಿಗಳಾದ ಭೀಮ್ ಅಲಿಯಾಸ್ ಡೈನಾ ಬಿನ್ ಗಂಗಾರಾಮ್ ಮತ್ತು ಅರ್ಜುನ್ ಅಲಿಯಾಸ್ ಮಾರ್ವಾಡ ಬಿನ್ ಹರಿಲಾಲ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ರಾಯಲ್ ಎನ್ ಫೀಲ್ಡ್ ಬೈಕ್, ಹೋಂಡಾ ಡಿಯೋ ಸ್ಕೂಟರ್, ಮತ್ತು ನಾಲ್ಕು ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕುಂಬಾರಕೊಪ್ಪಲು ನಿವಾಸಿ ರಾಘವೇಂದ್ರ ಎಂಬವರು ಪುರಾತನ ಕಾಲದ ನಾಣ್ಯ ಮತ್ತು ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸವನ್ನು ಹೊಂದಿದ್ದು ಇವರನ್ನು ಸಂಪರ್ಕಿಸಿದ ಅರೋಪಿಗಳು ತಮ್ಮ ಊರಿನಲ್ಲಿ ಮನೆ ಪಾಯ ತೆಗೆಯುವಾಗ ರಾಜರ ಕಾಲದ ಚಿನ್ನದ ನಾಣ್ಯಗಳು ಸಿಕ್ಕಿದ್ದು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಹೇಳಿದ್ದರು. ಮೊದಲಿಗೆ ಒಂದು ಅಸಲಿ ಚಿನ್ನದ ನಾಣ್ಯವನ್ನೂ ನೀಡಿ ನಂಬಿಕೆ ಗಳಿಸಿಕೊಂಡಿದ್ದರು. ನಂತರ 30 ಲಕ್ಷರೂ.ಗಳನ್ನು ಪಡೆದುಕೊಂಡು ಚಿನ್ನದ ನಾಣ್ಯ ಮತ್ತು ಗುಂಡುಗಳ ಸರಗಳುಳ್ಳ ಬ್ಯಾಗ್ ಗಳನ್ನು ನೀಡಿ ಹೋಗಿದ್ದರು. ಮನೆಗೆ ಬಂದು ಪರಿಶೀಲಿಸಿದಾಗ ನಕಲಿ ಚಿನ್ನವೆಂದು ತಿಳಿದು ಬಂದಿದ್ದು ಸರಸ್ವತಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಇಬ್ಬರನ್ನು ಬಂಧಿಸಿದ್ದು ತನಿಖೆ ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *