ಧೋನಿ ನಾಯಕತ್ವವನ್ನು ಉಳಿಸಿಕೊಂಡಿದ್ದ ಶ್ರೀನಿವಾಸನ್‌!

ದೆಹಲಿ: ಎಮ್‌ಎಸ್‌ ಧೋನಿ ವಿಶ್ವ ಕಂಡ ಅಮೋಘ ಕಪ್ತಾನರಲ್ಲಿ ಒಬ್ಬರು ಎಂಬ ಮಾತಿನಲ್ಲಿ ಬಹುಷಃ ಯಾವುದೇ ಅನುಮಾನವಿಲ್ಲ. ಆದರೆ ಧೋನಿ ನಾಯಕತ್ವಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮಾಜಿ ಅಧ್ಯಕ್ಷರಾಗಿದ್ದ ಎನ್ ಶ್ರೀನಿವಾಸನ್ ಅತ್ಯಂತ ಕುತೂಹಲಕಾರಿ ಹಾಗೂ ಅಚ್ಚರಿಯ ಸಂಗತಿಯೊಂದನ್ನು ಹೊರಹಾಕಿದ್ದಾರೆ. ಹಿಂದೊಮ್ಮೆ ಧೋನಿ ನಾಯಕತ್ವಕ್ಕೆ ಕಂಟಕ ಎದುರಾಗಿದ್ದು, ಆದರೆ ಆ ವೇಳೆ ನಾನು ಧೋನಿ ನಾಯಕತ್ವವನ್ನು ಉಳಿಸಿಕೊಂಡಿದ್ದೆ ಎಂಬ ಶ್ರೀನಿವಾಸನ್‌ ಹೇಳಿಕೆ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕನಾಗಿ ಅತ್ಯಂತ ಯಶಸ್ಸನ್ನು ಕಂಡ ಆಟಗಾರ. ಧೋನಿ ನಿವೃತ್ತಿ ಹೇಳಿದ ಸಂದರ್ಭದಲ್ಲಿ ಅನೇಕರು ಧೋನಿಯ ವಿಚಾರವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ನಾನು ಬಿಸಿಸಿಐ ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿದಯಲ್ಲಿ ಒಮ್ಮೆ ನಾಯಕತ್ವದಿಂದ ಮಹೇಂದ್ರ ಸಿಂಗ್ ಧೋನಿಯನ್ನು ಕೆಳಗಿಳಿಸಲು ಆಯ್ಕೆಗಾರರು ಸರ್ವಾನುಮತದಿಂದ ತೀರ್ಮಾನವನ್ನು ಮಾಡಿಕೊಂಡಿದ್ದರು. ಆಗ ತನ್ನ ಅಧಿಕಾರವನ್ನು ಬಳಸಿಕೊಂಡು ಧೋನಿ ನಾಯಕತ್ವ ಉಳಿಸಿಕೊಳ್ಳುವಂತೆ ಮಾಡಿದ್ದೆ. 2011ರ ವಿಶ್ವಕಪ್‌ನಲ್ಲಿ ಭಾರತ ತಂಡ ಅದ್ಭುತ ಆಟದ ಮೂಲಕ ಎರಡನೇ ಬಾರಿಗೆ ಏಕದಿನ ವಿಶ್ವಕಪ್ ಗೆದ್ದು ಬೀಗಿತ್ತು. ಆದರೆ ಅದಾದ ನಂತರದ ಕ್ರಿಕೆಟ್ ಋತುವಿನಲ್ಲಿ ವಿದೇಶದಲ್ಲಿ ನಡೆದ ಎರಡು ಸರಣಿಯಲ್ಲಿ ಭಾರತ ತಂಡ ಅತ್ಯಂತ ಕೆಟ್ಟ ಪ್ರದರ್ಶನವನ್ನು ನೀಡಿತ್ತು. ಅದು ಟೀಮ್ ಇಂಡಿಯಾ ನಾಯಕನಾಗಿದ್ದ ಧೋನಿ ಸ್ಥಾನಕ್ಕೆ ಕುತ್ತು ತಂದಿತ್ತು. ವಿಶ್ವ ಕಪ್ ಗೆದ್ದ ಮುಂದಿನ ಋತುವಿನಲ್ಲಿ ಭಾರತ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿ ಅಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು 0-4 ಅಂರತದಿಂದ ಹೀನಾಯವಾಗಿ ಕಳೆದುಕೊಂಡಿತ್ತು. ಅದಾದ ಬಳಿಕ ಮುಂದಿನ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನೂ ಇದೇ ರೀತಿ 0-4 ಅಂತರದಿಂದ ಸೋಲನ್ನು ಕಂಡಿತ್ತು. ಈ ಸಂದರ್ಭದಲ್ಲಿ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಕ್ರಿಸ್ ಶ್ರೀಕಾಂತ್ ಇದ್ದರು. ಸಮಿತಿಯ ಸದಸ್ಯರಾಗಿದ್ದ ಮೊಹಿಂದರ್ ಅಮರನಾಥ್ ನಾಯಕತ್ವ ಬದಲಿಸುವ ವಿಚಾರವನ್ನು ಮಂಡಿಸಿದಾಗ ಅದಕ್ಕೆ ಎಲ್ಲಾ ಸದಸ್ಯರೂ ಒಪ್ಪಿಗೆಯನ್ನೂ ಸೂಚಿಸಿದ್ದರು. ಆದರೆ ಈ ನಿರ್ಧಾರವನ್ನು ಶ್ರೀನಿವಾಸ್ ಒಪ್ಪಿರಲಿಲ್ಲ. ಹೀಗಾಗಿ ಟೀಮ್ ಇಂಡಿಯಾ ನಾಯಕನಾಗಿ ಎಂಎಸ್ ಧೋನಿ ಮುಂದುವರಿದಿದ್ದರು ಎಂಬ ವಿಚಾರವನ್ನು ಸ್ವತಃ ಶ್ರಿನಿವಾಸನ್ ಬಹಿರಂಗಪಡಿಸಿದ್ದಾರೆ. ಸದ್ಯ ಶ್ರೀನಿವಾಸನ್‌ ಹೇಳಿಕೆ ವ್ಯಾಪಕ ಚರ್ಚೆ ಪಡೆದುಕೊಂಡಿದೆ.

Leave a Reply

Your email address will not be published. Required fields are marked *