ದೀಪಕ್ ರಾವ್ ಹತ್ಯೆ ಆರೋಪಿಯ ಕೊಲೆಗೆ ಯತ್ನ? ತಂಡದಿಂದ ಮನೆಗೆ ನುಗ್ಗಿ ಬೆದರಿಕೆ!

ಮಂಗಳೂರು: ಬಿಜೆಪಿ ಕಾರ್ಯಕರ್ತ ಸುರತ್ಕಲ್ ಕಾಟಿಪಳ್ಳದ ದೀಪಕ್ ರಾವ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಕಿನ್ನಿಗೋಳಿ ಸಮೀಪದ ಉಲ್ಲಂಜೆ ನಿವಾಸಿ ನೌಶಾದ್ ಎಂಬಾತನ ಕೊಲೆಗೆ ಯತ್ನ ನಡೆದಿದೆ ಎಂದು ಹೇಳಲಾಗುತ್ತಿದೆ. ನಿನ್ನೆ ಸಂಜೆ ನೌಶಾದ್ ಉಲ್ಲಂಜೆಯ ಮನೆಯಲ್ಲಿದ್ದ ವೇಳೆ ತಂಡವೊಂದು ನೌಶಾದ್ ನನ್ನು ಕೇಳಿಕೊಂಡು ಮನೆಗೆ ಬಂದಿದ್ದು ಈ ವೇಳೆ ನೌಶಾದ್ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಮನೆಮಂದಿಗೆ ಬೆದರಿಕೆಯೊಡ್ಡಿದ ತಂಡ ಪರಾರಿಯಾಗಿದೆ ಎಂದು ಹೇಳಲಾಗುತ್ತಿದ್ದು ಈ ಕುರಿತು ಇಲ್ಲಿಯವರೆಗೆ ಪೊಲೀಸ್ ದೂರು ನೀಡಿಲ್ಲ.
5-6 ಮಂದಿ ಯುವಕರು ಕಾರ್, ಬೈಕ್ ಗಳಲ್ಲಿ ನೌಶಾದ್ ಮನೆಯೆದುರು ಬಂದಿದ್ದು ಈ ವೇಳೆ ನೌಶಾದ್ ಹಿಂದಿನ ಬಾಗಿಲಿನಿಂದ ಪರಾರಿಯಾಗಿದ್ದಾನೆ. ಬಂದಿದ್ದ ತಂಡ ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ದಾಂಧಲೆ ಎಸಗಿದೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಇನ್ನೂ ಸ್ಪಷ್ಟತೆ ಲಭಿಸಿಲ್ಲ. ನೌಶಾದ್ ಮೇಲೆ ದಾಳಿ ನಡೆಸಲು ತಂಡ ಬಂದಿತ್ತೇ ಅಥವಾ ಬೇರೆ ಕಾರಣಕ್ಕೆ ಬಂದಿತ್ತೇ ಎನ್ನುವುದು ಇನ್ನಷ್ಟೇ ತಿಳಿದುಬರಬೇಕಿದೆ. ಒಂದೊಮ್ಮೆ ತನ್ನ ಕೊಲೆಗೆ ಯತ್ನ ನಡೆದಿದ್ದರೆ ಪೊಲೀಸರಿಗೆ ದೂರು ನೀಡದೆ ಸುಮ್ಮನಿರುವುದೇಕೆ ಎಂದು ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.
2018ರಲ್ಲಿ ಕಾಟಿಪಳ್ಳ ಎಂಬಲ್ಲಿ ದೀಪಕ್ ರಾವ್ ನನ್ನು ಹಾಡಹಗಲೇ ದುಷ್ಕರ್ಮಿಗಳು ತಲವಾರಿನಿಂದ ಕಡಿದು ಕೊಲೆಗೈದಿದ್ದರು. ಪ್ರಕರಣದಲ್ಲಿ ಉಲ್ಲಂಜೆಯ ನೌಶಾದ್ ಪ್ರಮುಖ ಆರೋಪಿಯಾಗಿದ್ದ. ಈತ ಕೃತ್ಯದಲ್ಲಿ ಪಾಲ್ಗೊಂಡು ಸಹಚರರ ಜೊತೆ ಪರಾರಿಯಾಗುತ್ತಿದ್ದ ಸಂದರ್ಭ ಬೆನ್ನಟ್ಟಿದ್ದ ಪೊಲೀಸ್ ತಂಡ ಎಡಪದವು ಸಮೀಪ ಕಾರಿನ ಮೇಲೆ ಗುಂಡು ಹಾರಿಸಿ ನಾಲ್ವರನ್ನು ವಶಕ್ಕೆ ಪಡೆದುಕೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 13 ಜನ ಕೊಲೆ ಆರೋಪಿಗಳ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ನೌಶಾದ್ ಕೆಲತಿಂಗಳ ಹಿಂದಷ್ಟೇ ಜಾಮೀನು ಪಡೆದು ಹೊರಬಂದಿದ್ದಾನೆ.
