`ದಕ್ಷ ಅಧಿಕಾರಿಗಳನ್ನು ಗುಬ್ಬಿ ತಾಲೂಕಿಂದ ವರ್ಗಾಯಿಸುತ್ತಿರುವುದೇಕೆ?’ -ಜೆಡಿಎಸ್ ಮುಖಂಡರು ಗರಂ

ಗುಬ್ಬಿ: `ಸಂಸದ ಬಸವರಾಜು ಅವರನ್ನು ಬೆಂಬಲಿಸಿದ್ದಲ್ಲಿ ತಮ್ಮ ಕಲ್ಲು ಗಣಿಗಾರಿಕೆ ಸುಗಮವಾಗಿ ನಡೆಯುದೆಂಬ ಉದ್ದೇಶದಲ್ಲಿ ಶಾಸಕರ ವಿರುದ್ದ ಸಲ್ಲದ ಹೇಳಿಕೆ ನೀಡುವ ಬಿಜೆಪಿ ಮುಖಂಡರು ತಮ್ಮದೇ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವ ವಿಶೇಷ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದೀರಿ ತಿಳಿಸಿ’ ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಚ್.ಆರ್.ಗುರುರೇಣುಕಾರಾಧ್ಯ ಸವಾಲೆಸೆದರು. ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸಾರ್ವಜನಿಕರ ದೂರುಗಳಿಗೆ ಸ್ಪಂದಿಸುವ ಕರ್ತವ್ಯ ಮಾಡಿದ ಶಾಸಕರು ಲಂಚ ಬೇಡಿಕೆಯ ಹೊತ್ತ ಅಧಿಕಾರಿಗಳಿಗೆ ಛೀಮಾರಿ ಹಾಕಿದ್ದಾರೆ. ಮಾಧ್ಯಮ ಮೂಲಕ ಎಚ್ಚರಿಕೆ ನೀಡಿರುವುದು ಸರಿ ಇದೆ. ಆದರೆ ಬಿಜೆಪಿ ಮುಖಂಡರು ಇಂತಹ ಅಧಿಕಾರಿಗಳ ವಕಾಲತ್ತು ವಹಿಸುವುದು ವಿಪರ್ಯಾಸ ಎಂದರು.
ಪ್ರಚಾರದ ಗೀಳಿಗೆ ಎಂದೂ ಬಾರದ ಶಾಸಕರು ಸತತ ನಾಲ್ಕು ಬಾರಿ ಶಾಸಕ ಸ್ಥಾನಕ್ಕೆ ಆಯ್ಕೆಯಾಗಿರುವ ಬಗ್ಗೆ ಅರಿತು ಮಾತನಾಡಬೇಕಿದೆ. ಕೆಲಸ ಮಾಡದೇ ಜನರು ಮತ ನೀಡುತ್ತಾರೆಯೇ ಎಂದು ಪ್ರಶ್ನಿಸಿದ ಅವರು ಕೊರೋನಾದಿಂದ ಇಡೀ ಜಿಲ್ಲೆಯೇ ಆತಂಕದಲ್ಲಿದೆ. ಸಂಸದರು ಮನೆ ಬಿಟ್ಟು ಹೊರಬಂದು ಜನರಿಗೆ ಧೈರ್ಯ ತುಂಬಿದ್ದ ಉದಾಹರಣೆಗಳಿಲ್ಲ. ಸೀಲ್ಡೌನ್ ಏರಿಯಾದಲ್ಲಿ ಬಡ ಕುಟುಂಬಗಳಿಗೆ ಸಹಾಯ ಮಾಡಿದ ನಿದರ್ಶನವೂ ಇಲ್ಲ. ಈ ಜತೆಗೆ ಪಟ್ಟಣ ಪಂಚಾಯಿತಿ ಅವ್ಯವಹಾರದ ಬಗ್ಗೆ ಮಾತನಾಡುವ ಬೆಟ್ಟಸ್ವಾಮಿ ಅವರು ಶಾಸಕರೊಟ್ಟಿಗೆ 10 ವರ್ಷ ಪ.ಪಂ. ಸದಸ್ಯ ಹಾಗೂ ಅಧ್ಯಕ್ಷರಾಗಿ ಮಾಡಿದ್ದೇನು, 20 ವರ್ಷದಲ್ಲಿ ಅರ್ಧದಷ್ಟು ಭ್ರಷ್ಟಾಚಾರ ಅವರಿಂದಲೇ ಆಗಿರಬೇಕಲ್ಲವೇ ಎಂದು ಕುಟುಕಿ, ವಿನಾಕಾರಣ ಸಲ್ಲದ ಹೇಳಿಕೆ ನೀಡುತ್ತಾ ಕೆಸರೆರಚಾಟ ಬಿಟ್ಟು ಸಾರ್ವಜನಿಕರ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ತಾಲ್ಲೂಕು ಯುವ ಜೆಡಿಎಸ್ ಅಧ್ಯಕ್ಷ ಕೆ.ಆರ್.ವೆಂಕಟೇಶ್ ಮಾತನಾಡಿ ಈ ಹಿಂದೆ ಎಸಿಬಿ ಬಲೆಗೆ ಸಿಕ್ಕಿ ಜೈಲು ಶಿಕ್ಷೆಯನ್ನು ಅನುಭವಿಸಿದ ತಹಸೀಲ್ದಾರ್ ಅವರು ಮತ್ತೊಮ್ಮೆ ಪದೋನ್ನತಿಯೊಂದಿಗೆ ಗುಬ್ಬಿಗೆ ಗ್ರೇಡ್ 1 ತಹಸೀಲ್ದಾರ್ ಆಗಿ ನೇಮಕವಾಗಿರುವುದೇ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿದೆ. ದಕ್ಷ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಭ್ರಷ್ಟಾಚಾರ ಸಾಬೀತಾದ ಅಧಿಕಾರಿಗಳನ್ನು ಗುಬ್ಬಿ ತಾಲ್ಲೂಕಿಗೆ ತರುವ ಉದ್ದೇಶವೇನು ಎಂದ ಅವರು ಇಂತಹ ಅಧಿಕಾರಿಗಳ ಪರ ಹೇಳಿಕೆ ನೀಡಲು ಬಿಜೆಪಿ ಮುಖಂಡರು ಮುಂದಾಗುವುದು ಅವರ ಯೋಗ್ಯತೆ ತಿಳಿಸುತ್ತದೆ ಎಂದು ಟೀಕಿಸಿದರು.
ಪ.ಪಂ. ಮಾಜಿ ಉಪಾಧ್ಯಕ್ಷ ಜಿ.ಸಿ.ನರಸಿಂಹಮೂರ್ತಿ ಮಾತನಾಡಿ ಜಾತೀಯತೆ ಎತ್ತಿ ಹಿಡಿದ ಬಿಜೆಪಿಯ ದಿಲೀಪ್ಕುಮಾರ್ ದಲಿತ ವಿರೋಧವನ್ನು ಈ ಹಿಂದೆ ತೋರಿದ್ದಾರೆ. ದಲಿತ ಮುಖಂಡನೊಂದಿಗೆ ಅನುಚಿತವಾಗಿ ವರ್ತಿಸಿದ ಉದಾಹರಣೆ ಇದೆ. ದಲಿತ ಯುವಕನ ಸ್ಪರ್ಶಕ್ಕೆ ತಮ್ಮ ಕೈಗಳನ್ನು ಬಿಸ್ಲೇರಿ ನೀರಿನಲ್ಲಿ ತೊಳೆದುಕೊಂಡು ಅಸ್ಪøಶ್ಯತೆಯನ್ನು ವ್ಯಕ್ತಪಡಿಸಿದ ಈ ವ್ಯಕ್ತಿಯ ಕೆಂಪು ಗಣಿಗಾರಿಕೆ ಎಲ್ಲರಿಗೂ ತಿಳಿದಿದೆ. ಈ ಹಿಂದೆ ಚೇಳೂರು ಠಾಣೆಯಲ್ಲಿ ಬೆತ್ತಲೆ ನಿಂತಿದ್ದ ಸಂದರ್ಭದಲ್ಲಿ ಗುಬ್ಬಿ ಶಾಸಕ ಶ್ರೀನಿವಾಸ್ ಅವರೇ ಬಿಡಿಸಿಕೊಂಡು ಬರಲು ದಯಮಾಡಿದ್ದು ಎಂಬುದು ಮರೆತಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯನೂ ಅಲ್ಲದ ಈ ದಿಲೀಪ್ಕುಮಾರ್ ಅವರ ಹೇಳಿಕೆಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ವರ್ಗಾವಣೆ ಮಾಡುವ ಸರ್ಕಾರದ ನಡವಳಿಕೆ ಕೂಡಾ ಅನುಮಾನಕ್ಕೆ ಕಾರಣವಾಗಿದೆ. ಲೂಟಿ ಹಣದಲ್ಲೇ ಶಾಸಕನಾಗುವ ಕನಸು ಕಾಣುತ್ತಿರುವ ಬಿಜೆಪಿಯ ಸ್ಥಳೀಯ ಮುಖಂಡರಿಗೆ ಮುಖಭಂಗಕ್ಕೆ ತಯಾರಿ ನಡೆಸಿದ ಬಿಜೆಪಿ ವರಿಷ್ಠರು ಬೆಂಗಳೂರಿನ ಬಲಿಷ್ಠ ನಾಯಕ ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ ಅವರನ್ನು ಕರೆತರಲು ಮುಂದಾಗಿರುವುದು ಸ್ಥಳೀಯ ಬಿಜೆಪಿ ಮುಖಂಡರ ಯೋಗ್ಯತೆ ತೋರುತ್ತಿದೆ ಎಂದು ಅಣುಕು ಮಾಡಿದರು.
ಪ.ಪಂ. ಸದಸ್ಯ ಕುಮಾರ್ ಮಾತನಾಡಿ ಪಟ್ಟಣ ಪಂಚಾಯಿತಿಯಲ್ಲಿ ಬೋರ್ವೆಲ್ ಏಜೆನ್ಸಿ ಅವರಿಂದ ಲೂಟಿ ಹೊಡೆವರು ಯಾರು ಎಂಬುದು ತಿಳಿಯಬೇಕಿದೆ. ಮತ್ತೊಬ್ಬರ ಸ್ಥಳದಲ್ಲಿ ದೊಡ್ಡ ಮನೆ ಕಟ್ಟಿಕೊಂಡ ಬಿಜೆಪಿ ಪಪಂ ಸದಸ್ಯ ಸಂಸದರನ್ನು ಬಳಸಿಕೊಂಡು ಸಾರ್ವಜನಿಕರಿಂದ ಹೇಗೆಲ್ಲಾ ಲೂಟಿ ಮಾಡಿದ್ದಾರೆ ತಿಳಿದಿದೆ. ಭ್ರಷ್ಟಾಚಾರ ಆರೋಪಿ ಮುಖ್ಯಾಧಿಕಾರಿ ಭೂ ಪರಿವರ್ತನೆ ವಿಚಾರದಲ್ಲಿ ಲಂಚ ಕೇಳಿದ್ದು ನನ್ನ ಮುಂದೆ ನಡೆದಿದ್ದಾಗಿದೆ. ಇಂತಹ ಅಧಿಕಾರಿಗಳನ್ನು ಓಲೈಸುವ ಬಿಜೆಪಿ ಸದಸ್ಯರು ಪಂಥಾಹ್ವಾನ ನೀಡುವುದು ಹಾಸ್ಯಾಸ್ಪದ ಎಂದರು. ಈ ಸಂದರ್ಭದಲ್ಲಿ ಪಪಂ ಸದಸ್ಯ ರೇಣುಕಾಪ್ರಸಾದ್, ಎಪಿಎಂಸಿ ಸದಸ್ಯ ಲೋಕೇಶ್ಚರ್, ಮುಖಂಡರಾದ ಕೊಡಿಯಾಲ ಮಹದೇವ್, ಸಿದ್ದರಾಜು, ಹೊಸಕೆರೆ ಬಾಬು, ರಾಜಣ್ಣ, ಧಾಮು, ಕಾರ್ತೀಕೆಯನ್, ಯೋಗೀಶ್ ಇತರರು ಇದ್ದರು.