ತಲಕಾವೇರಿ: ಮೃತ ಅರ್ಚಕರ ಪುತ್ರಿಯರಿಗೆ ಪರಿಹಾರದ ಚೆಕ್ ಕೊಡಬೇಡಿ -ಕಾವೇರಿ ಸೇನೆ

ಮಡಿಕೇರಿ: ತಲಕಾವೇರಿ ಕ್ಷೇತ್ರದಲ್ಲಿ ಮನೆಯ ಮೇಲೆ ಬ್ರಹ್ಮಗಿರಿ ಬೆಟ್ಟದ ಒಂದು ಪಾಶ್ರ್ವ ಕುಸಿದು ಭೂಸಮಾಧಿಯಾಗಿರುವ ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್. ನಾರಾಯಣಾಚಾರ್ ಕುಟುಂಬಸ್ಥರಿಗೆ ಸರ್ಕಾರ ನೀಡಿರುವ ಪರಿಹಾರ ಮೊತ್ತವನ್ನು ನಾರಾಯಣಾಚಾರ್ ಈರ್ವರು ಪುತ್ರಿಯರು ಪಡೆಯಲು ಅವರಿಗೆ ಯಾವುದೇ ಅರ್ಹತೆಯಿಲ್ಲ ಎಂದು ಕಾವೇರಿ ಸೇನೆ ಸಂಚಾಲಕ ರವಿ ಚಂಗಪ್ಪ ಕಿಡಿಕಾರಿದ್ದಾರೆ. ಅರ್ಚಕ ನಾರಾಯಣಾಚಾರ್ ಪುತ್ರಿಯರು ಪರಿಹಾರ ಮೊತ್ತ ಪಡೆಯುವ ಉದ್ದೇಶದಿಂದಲೇ ಮತಾಂತರಗೊಂಡ ನಂತರ ನಿಯಾಮಾನುಸಾರ ಬದಲಾಯಿಸಿಕೊಂಡ ತಮ್ಮ ಹೆಸರನ್ನು ಮರೆಮಾಚಿ ಬ್ರಾಹ್ಮಣ ಸಂಪ್ರದಾಯದಂತೆ ನಾಮಕರಣ ಮಾಡಿದ ಶಾರದ ಆಚಾರ್ ಮತ್ತು ನಮಿತಾ ಆಚಾರ್ ಹೆಸರಿನಲ್ಲಿ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ತಂದೆ ಗಜಗಿರಿ ಬೆಟ್ಟ ಕುಸಿತದಲ್ಲಿ ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ' ಎಂದು ಕಾವೇರಿ ಸೇನೆ ಸಂಚಾಲಕ ರವಿ ಚಂಗಪ್ಪ ಆರೋಪಿಸಿದ್ದಾರೆ. ನಾರಾಯಣಾಚಾರ್ ಪುತ್ರಿಯರು ತಮ್ಮ ಮಾತೃ ಧರ್ಮವನ್ನು ತಿರಸ್ಕರಿಸಿ ಅನ್ಯಧರ್ಮೀಯರನ್ನು ವಿವಾಹವಾಗಿ ತಮ್ಮ ಶಾಲಾ ದಾಖಲೆಯಲ್ಲಿದ್ದ ಮೂಲ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಓರ್ವ ಪುತ್ರಿ ಇಸ್ಲಾಂ ಧರ್ಮೀಯನನ್ನು ಪ್ರೀತಿಸಿ ವಿವಾಹವಾಗಿ ನಮಿತಾ ನಜರತ್ ಎಂದು ಹಾಗೂ ಮತ್ತೋರ್ವ ಪುತ್ರಿ ಕ್ರೈಸ್ತ ಧರ್ಮೀಯನನ್ನು ಪ್ರೀತಿಸಿ ಶೆನೋನ್ ಫರ್ನಾಂಡೀಸ್ ಎಂದು ಹೆಸರು ಬದಲಾಯಿಸಿಕೊಂಡಿರುವದನ್ನು ಜಿಲ್ಲಾಡಳಿತ ಹಾಗೂ ಮಡಿಕೇರಿ ತಹಶಿಲ್ದಾರ್ ದೃಢಪಡಿಸಿದ್ದಾರೆ. ಈರ್ವರು ಪುತ್ರಿಯರು ಈಗ ಭಾರತೀಯ ಪೌರತ್ವವನ್ನೇ ಹೊಂದಿಲ್ಲ. ತಮ್ಮ ಮಕ್ಕಳಿಗೂ ಅನ್ಯ ಧರ್ಮದ ಹೆಸರನ್ನು ನಾಮಕರಣ ಮಾಡಿ ವಿದೇಶಿ ಪೌರತ್ವ ಒದಗಿಸಿದ್ದಾರೆ’ ಎಂದು ಕಾವೇರಿ ಸೇನೆ ಸಂಚಾಲಕ ರವಿ ಚಂಗಪ್ಪ ಆರೋಪಿಸಿದ್ದಾರೆ.
ಕಾನೂನಾತ್ಮಕವಾಗಿ ಈರ್ವರು ಪುತ್ರಿಯರಿಗೆ ಪರಿಹಾರ ಲಭಿಸಲು ಸಾಧ್ಯವಿಲ್ಲ ಎಂದಾದ ಮೇಲೆ ಜಿಲ್ಲಾಧಿಕಾರಿ ಏಕೆ ವಿಶೇಷ ಆಸಕ್ತಿ ವಹಿಸುತ್ತಿದ್ದಾರೆ ಎಂದು ರವಿ ಚಂಗಪ್ಪ ಪ್ರಶ್ನಿಸಿದ್ದಾರೆ. ಜಿಲ್ಲೆಯಲ್ಲಿ ಹಿಂದೂ ಧರ್ಮ, ಹಿಂದೂ ಧಾರ್ಮಿಕ ವಿಧಿ ವಿಧಾನಗಳನ್ನು ಪಾಲಿಸುತ್ತಿರುವ, ಹಿಂದೂ ಸಂಸ್ಕೃತಿ, ಸಂಸ್ಕಾರವನ್ನು ಪೋಷಿಸುತ್ತಿರುವ ಪ್ರಜ್ಞಾವಂತ ಬ್ರಾಹ್ಮಣ ಸಮುದಾಯದ ಪ್ರಮುಖರು ಬ್ರಾಹ್ಮಣತ್ವವನ್ನು ಉಲ್ಲಂಘಿಸಿ ಅನ್ಯ ಧರ್ಮದತ್ತ ಸೆಳೆತ ಹೊಂದಿರುವವರು ಕ್ಷೇತ್ರ ಮತ್ತು ಬ್ರಾಹ್ಮಣತ್ವದ ಹೆಸರಿನಲ್ಲಿ ಪರಿಹಾರಕ್ಕೆ ಕೈಯೊಡ್ಡುತ್ತಿರುವುದನ್ನು ಖಂಡಿಸಬೇಕು ಎಂದು ರವಿ ಚಂಗಪ್ಪ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *