ಟರ್ಕಿ ಅಧ್ಯಕ್ಷರ ಪತ್ನಿಯ ಭೇಟಿ: ಅಮೀರ್ ಖಾನ್ ಹೊಸ ವಿವಾದ!

ನವದೆಹಲಿ: ಕಾಶ್ಮೀರ ವಿಚಾರದಲ್ಲಿ ಪಾಕ್ ಪರವಹಿಸಿ ಮಾತಾಡಿದ್ದ ಟರ್ಕಿ ಅಧ್ಯಕ್ಷ ರೆಸಿಪ್ ತಯ್ಯಿಪ್ ಎರ್ಡೋಗನ್ ಅವರ ಪತ್ನಿಯನ್ನು ಬಾಲಿವುಡ್ ನಟ ಅಮೀರ್ ಖಾನ್ ಭೇಟಿ ಮಾಡಿದ್ದು ಈ ಮೂಲಕ ಹೊಸ ವಿವಾದ ಸೃಷ್ಟಿ ಮಾಡಿದ್ದಾರೆ. ರೆಸಿಪ್ ತಯ್ಯಿಪ್ ಎರ್ಡೋಗನ್ ಅವರ ಪತ್ನಿಯೊಂದಿಗೆ ಅಮೀರ್ ಖಾನ್ ಮಾತನಾಡುತ್ತಿರುವ ಫೋಟೊ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಶೂಟಿಂಗ್ ನಿಮಿತ್ತ ಇಸ್ತಾಂಬುಲ್ ತೆರಳಿದ್ದ ವೇಳೆ ಟರ್ಕಿಯ ಪ್ರಥಮ ಮಹಿಳೆ ಎಮೈನ್ ಎರ್ಡೋಗನ್ ಅವರನ್ನು ಅಮೀರ್ ಖಾನ್ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದರ ಫೋಟೊವನ್ನು ಎಮಿನೆ ಅವರು ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿದ್ದರು. ಜಗತ್ತಿನ ಖ್ಯಾತ ಭಾರತೀಯ ನಟ, ನಿರ್ಮಾಪಕ ಮತ್ತು ನಿರ್ದೇಶಕ ಅಮೀರ್ ಖಾನ್ ಅವರನ್ನು ಇಸ್ತಾಂಬುಲ್‍ನಲ್ಲಿ ಭೇಟಿ ಮಾಡುವ ಸದವಕಾಶ ನನ್ನದಾಗಿತ್ತು. ಅವರು ತಮ್ಮ ಇತ್ತೀಚಿನ
ಲಾಲ್ ಸಿಂಗ್ ಛಡ್ಡಾ’ ಚಿತ್ರದ ಚಿತ್ರೀಕರಣವನ್ನು ಟರ್ಕಿಯ ವಿವಿಧ ಭಾಗಗಳಲ್ಲಿ ನಡೆಸಲು ನಿರ್ಧರಿಸಿರುವುದು ಸಂತಸ ತಂದಿದೆ. ಸಿನಿಮಾ ನೋಡಲು ಕಾದಿದ್ದೇನೆ’ ಎಂದು ಎಮೈನ್ ಟ್ವೀಟ್ ಮಾಡಿದ್ದರು.
ಎಮೈನ್ ಅವರು ಇಸ್ತಾಂಬುಲ್‍ನ ಅಧ್ಯಕ್ಷರ ನಿವಾಸದಲ್ಲಿನ ಭೇಟಿಯ ಈ ಫೋಟೊ ಹಂಚಿಕೊಂಡಿದ್ದು ಆಮೀರ್ ಖಾನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. `ಭಾರತ ವಿರೋಧಿ ನೀತಿಯ ಕಾರಣದಿಂದ ಖ್ಯಾತಿ ಹೊಂದಿರುವ ವ್ಯಕ್ತಿಗಳು ಮತ್ತು ಮಾದರಿ ಜನರ ಕಡೆಗೆ ಕೆಲವು ನಟರು ಹಾಗೂ ವ್ಯಕ್ತಿಗಳಿಗೆ ಒಲವು ಹೆಚ್ಚಿದೆ. ಟರ್ಕಿಯ ಪ್ರಥಮ ಮಹಿಳೆಯನ್ನು ಭೇಟಿ ಮಾಡಿರುವುದಕ್ಕೆ ನಟರೊಬ್ಬರು ಹೆಮ್ಮೆ ಪಡುತ್ತಿರುವುದು ಅನೇಕ ಸಂಗತಿಗಳನ್ನು ಸೂಚಿಸುತ್ತದೆ’ ಎಂದು ವಿಎಚ್‍ಪಿ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ಕಿಡಿಕಾರಿದ್ದಾರೆ.