ಜಮೈಕಾ ತಲ್ಲವಾಹ್ಸ್‌ಗೆ ಗೆಲುವು

ಟ್ರಿನಿಡಾಡ್‌: ಇಲ್ಲಿ ನಡೆಯುತ್ತಿರುವ ಕೆರೇಬಿಯನ್‌ ಪ್ರೀಮಿಯರ್‌ ಲೀಗ್‌ನ 3ನೇ ಪಂದ್ಯದಲ್ಲಿ ಸೇಂಟ್ ಲೂಸಿಯಾ ಝೌಕ್ಸ್ ವಿರುದ್ಧ ಜಮೈಕಾ ತಲ್ಲವಾಹ್ಸ್‌ 5 ವಿಕೆಟ್ ಗೆಲುವು ಸಾಧಿಸಿ, ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಮೊದಲು ಬ್ಯಾಟಿಂಗ್‌ ನಡೆಸಿದ ಝೌಕ್ಸ್‌ ಉತ್ತಮ ಆರಂಭ ಪಡೆಯದಿದ್ದರೂ ಮಾರ್ಕ್‌ ಡೆಯಾಲ್‌ (೧೭) ಹಾಗೂ ರೋಸ್ಟನ್ ಚೇಸ್ (೫೨) ಸ್ಫೋಟಕ ಆಟ ಪ್ರದರ್ಶಿಸಿ ತಂಡಕ್ಕೆ ಚೇತರಿಕೆ ಜೊತೆಗೆ ಸ್ಪರ್ಧಾತ್ಮಕ ಮೊತ್ತ ಪೇರಿಸುವಲ್ಲಿ ನೆರವಾದರು. ಅಲ್ಲದೆ ಮಧ್ಯಮ ಕ್ರಮಾಂಕದಲ್ಲಿ ನಜೀಬುಲ್ಲಾ ಝದ್ರನ್‌ (೨೫) ಕೂಡ ತಂಡಕ್ಕೆ ಆಸರೆಯಾದರು. ಚೇಸ್‌ ತನ್ನ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್‌ ಸಿಡಿಸಿದ್ದರು. ಪರಿಣಾಮ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದು 158 ರನ್ ಮಾಡಿತ್ತು. ಅತ್ತ ಜಮೈಕಾ ಪರ ಪೆರವಾಲ್‌ ಹಾಗೂ ಮುಜೀದ್‌ ಉಲ್‌ ರೆಹ್ಮಾನ್‌ ತಲಾ ಎರಡು ವಿಕೆಟ್‌ ಪಡೆದರು.
ಗುರಿ ಬೆನ್ನತ್ತಿದ ಜಮೈಕಾ ಕೂಡ ಆರಂಭಿಕ ಆಘಾತ ಕಂಡರೂ ಆರಂಭಿಕ ಗ್ಲೆನ್‌ ಫಿಲಿಪ್ಸ್‌ ವೇಗದ ೪೪ ರನ್‌ ಗಳಿಸಿ, ಎದುರಾಳಿ ಬೌಲರ್ಸ್‌ಗಳ ಮೇಲೆ ಒತ್ತಡ ಹಾಕುವಲ್ಲಿ ಸಫಲರಾದರು. ಅಲ್ಲದೆ ರೊವ್ಮೆನ್‌ ಪೊವೆಲ್‌ (೨೬) ಹಾಗೂ ಆಸಿಫ್‌ ಅಲಿ (ಅಜೇಯ ೪೭) ಅಬ್ಬರದ ಆಟ ಪ್ರದರ್ಶಿಸಿದರು. ಆಸಿಫ್‌ ಕೇವಲ ೨೭ ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್‌ ನೆರವಿನಿಂದ ೪೭ ರನ್‌ ಗಳಿಸಿದರು. ಕಾರ್ಲೋಸ್‌ ಬ್ರಾಥ್‌ವ್ಹೇಟ್‌ ಕೂಡ ಅಜೇಯ ೧೮ ರನ್‌ ಗಳಿಸಿದರು. ಅಂತಿಮವಾಗಿ ತಂಡ ೧೮.೫ ಓವರ್‌ಗಳಲ್ಲಿ ಐದು ವಿಕೆಟ್‌ ನಷ್ಟಕ್ಕೆ ೧೬೦ ರನ್‌ ಗಳಿಸಿ ಜಯ ಸಾಧಿಸಿತು. ಝೌಕ್ಸ್‌ ಪರ ಕೇಶ್ರಿಕ್‌ ವಿಲಿಯಮ್ಸ್‌ ಎರಡು ವಿಕೆಟ್‌ ಪಡೆದರು.

Leave a Reply

Your email address will not be published. Required fields are marked *