ಛತ್ತೀಸ್ ಗಢ: ನಾಲ್ವರು ನಕ್ಸಲರ ಎನ್ ಕೌಂಟರ್!

ಸುಕ್ಮಾ: ಭದ್ರತಾಪಡೆಗಳು ನಡೆಸಿದ ಎನ್ ಕೌಂಟರ್ನಲ್ಲಿ ನಾಲ್ವರು ನಕ್ಸಲರನ್ನು ಹತ್ಯೆಗೈಯಲಾಗಿದೆ. ಫುಲಂಪಾರ್ ಗ್ರಾಮದಲ್ಲಿ ಸೇನಾಪಡೆಗಳು ಗಸ್ತು ತಿರುಗುತ್ತಿದ್ದ ಸಂದರ್ಭ ಅಡಗಿ ಕುಳಿತಿದ್ದ ನಕ್ಸಲರು ಏಕಾಏಕಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿವೆ. ಈ ವೇಳೆ ನಾಲ್ಕು ಮಂದಿ ನಕ್ಸಲರು ಸಾವನ್ನಪ್ಪಿದ್ದಾರೆ. ಹಲವು ನಕ್ಸಲರು ಪರಾರಿಯಾಗಿದ್ದಾರೆ. ಸುಕ್ಮಾ ಜಿಲ್ಲೆಯ ಹೊರವಲಯದ ಜಗರಗುಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ನಾಲ್ಕು ಮಂದಿ ನಕ್ಸಲರು ಹತರಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್ಜಿ), ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್ಪಿಎಫ್) ಮತ್ತು ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) ಪಡೆಗಳ ಸಿಬ್ಬಂದಿ ತೊಡಗಿದ್ದರು ಎಂದು ಪೊಲೀಸ್ ಇನ್ ಸ್ಪೆಕ್ಟರ್ ಜನರಲ್ ಸುಂದರ್ ರಾಜ್ ಪಿ ಹೇಳಿದ್ದಾರೆ. ಘಟನಾ ಸ್ಥಳದಲ್ಲಿ ನಾಲ್ವರು ನಕ್ಸಲರ ಮೃತದೇಹಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 303 ರೈಫಲ್, ದೇಶೀ ನಿರ್ಮಿತ ಶಸ್ತ್ರಾಸ್ತ್ರಗಳು, ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಅಂತೆಯೇ ಶೋಧ ಕಾರ್ಯ ಕೂಡ ಮುಂದುವರೆದಿದೆ.