ಚೀನಾದಲ್ಲಿ ಆಹಾರದ ಅಭಾವ?!

ಬೀಜಿಂಗ್: ಯಾವುದೇ ದೇಶದ ಪ್ರಧಾನಿ ಅಥವಾ ನಾಯಕರು ಜನತೆಯ ಶ್ರೇಯೋಭಿವೃದ್ಧಿಗೆ ಒಂದಿಲ್ಲೊಂದು ಯೋಜನೆ ಅಥವಾ ಅಭಿಯಾನವನ್ನು ಆರಂಭಿಸುವುದು ಸಾಮಾನ್ಯ. ಸದ್ಯ ಇದೀಗ ಚೀನಾದಲ್ಲಿ ಆಹಾರ ಪೋಲಾಗುವುದನ್ನು ಉಳಿಸಲು ಅಲ್ಲಿನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ವಿಶೇಷ ಹಾಗೂ ಅಚ್ಚರಿಯ ʻಕ್ಲೀನ್‌ ಯುವರ್‌ ಪ್ಲೇಟ್‌ʼ ಅಭಿಯಾನವನ್ನು ಆರಂಭಿಸಿದ್ದಾರೆ. ಆದರೆ ಮೂಲಗಳ ಪ್ರಕಾರ ಚೀನಾದಲ್ಲಿ ಆಹಾರದ ಅಭಾವ ಎದುರಾಗಿದ್ದು, ಇದೇ ಕಾರಣಕ್ಕಾಗಿ ಈ ಅಭಿಯಾನ ಆರಂಭಿಸಲಾಗಿದೆ ಎಂಬ ಮಾತು ಕೂಡ ಕೇಳಿಬರುತ್ತಿದೆ.

ಆಹಾರ ವ್ಯರ್ಥವಾಗುವುದನ್ನು ತಡೆಯಲು ಮತ್ತು ಮಿತವ್ಯಯದ ಪ್ರಜ್ಞೆ ಅಳವಡಿಸುವ ದೃಷ್ಟಿಯಿಂದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಮಿತ ಪ್ರಮಾಣದ ಆಹಾರ ಆರ್ಡರ್ ಮಾಡುವ ಅಭಿಯಾನ ಆರಂಭಿಸಿದ್ದಾರೆ.‌ ಗುಂಪು ಗುಂಪಾಗಿ ಆಹಾರ ಸೇವಿಸುವ ಜನರು ಹೆಚ್ಚುವರಿ ಆಹಾರ ಆರ್ಡರ್ ಮಾಡಿ ವ್ಯರ್ಥ ಮಾಡುವುದು ಮಾಮೂಲು. ಈ ಸಂಪ್ರದಾಯವನ್ನು ತಡೆಯಲು ‘ಆಪರೇಷನ್ ಎಂಪ್ಟಿ ಪ್ಲೇಟ್’ ಎಂಬ ಆಂದೋಲನ ಶುರುಮಾಡಲಾಗಿದೆ ಎನ್ನಲಾಗಿದೆ. ಮುಖ್ಯವಾಗಿ ತಟ್ಟೆಯಲ್ಲಿ ಆಹಾರ ವ್ಯರ್ಥವಾಗಿ ಉಳಿಯದಂತೆ ತಡೆಯಲು ಮತ್ತು ಎಷ್ಟು ಅಗತ್ಯವೋ ಅಷ್ಟು ಮಾತ್ರವೇ ಆಹಾರ ಪೂರೈಸುವ ಹಾಗೂ ಸೇವಿಸುವ ಅಭಿಯಾನ ಇದಾಗಿದೆ. ‘ಆಹಾರ ವ್ಯರ್ಥ ಮಾಡುವುದು ಆಘಾತಕಾರಿ ಮತ್ತು ಅವಮಾನಕಾರಿ. ಆಹಾರ ವ್ಯರ್ಥ ಸಂಕಷ್ಟವನ್ನು ಹೆಚ್ಚಿಸುತ್ತದೆ. ಆಹಾರ ಭದ್ರತೆಯ ವಿಚಾರದಲ್ಲಿ ಜನರಲ್ಲಿ ಜಾಗೃತಿಯನ್ನು ಉಳಿಸುವುದು ಈ ಸಂದರ್ಭದಲ್ಲಿ ಬಹಳ ಮುಖ್ಯವಾಗಿದೆ. ಮಿತ ವ್ಯಯ ಹೆಚ್ಚು ಗೌರವಯುತ. ಈ ವರ್ಷದ ಕೊರೊನಾ ವೈರಸ್ ಪಿಡುಗಿನ ಪರಿಣಾಮವು ನಮಗೆ ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿದೆ’ ಎಂದು ಜಿನ್ ಪಿಂಗ್ ಹೇಳಿದ್ದಾರೆ. ಏಕಾಂಗಿಯಾಗಿ ಬರುವ ಗ್ರಾಹಕರಿಗೆ ಕೂಡ ಕಡಿಮೆ ಪ್ರಮಾಣ ಅಥವಾ ಈ ಹಿಂದೆ ನೀಡುತ್ತಿದ್ದ ಪ್ರಮಾಣದ ಅರ್ಧದಷ್ಟನ್ನು ಮಾತ್ರವೇ ಪೂರೈಸಬೇಕು ಎಂದು ರೆಸ್ಟೋರೆಂಟ್‌ಗಳಿಗೆ ಚೀನಾ ಸೂಚಿಸಿದೆ. ಹಾಗೆಯೇ ಗುಂಪುಗಳಾಗಿ ಬಂದು ಆಹಾರ ಸೇವಿಸುವವರು ಇರುವ ಜನಸಂಖ್ಯೆಗಿಂತ ಒಂದು ಪ್ಲೇಟ್ ಕಡಿಮೆ ಆಹಾರವನ್ನು ಆರ್ಡರ್ ಮಾಡಬೇಕು ಎಂದು ಸೂಚಿಸಲಾಗಿದೆ. ‘ನಾವು ಸೇವಿಸುವ ಆಹಾರದ ಪ್ರತಿ ಕಾಳು ಎಷ್ಟು ಪರಿಶ್ರಮದಿಂದ ಸೃಷ್ಟಿಯಾಗಿರುತ್ತದೆ ಎನ್ನುವುದು ಯಾರಿಗೆ ಗೊತ್ತು? ನಾವು ಇನ್ನೂ ಆಹಾರ ಭದ್ರತೆಯ ಕುರಿತು ಬಿಕ್ಕಟ್ಟಿನ ಮನಸ್ಥಿತಿಯನ್ನು ಉಳಿಸಿಕೊಳ್ಳಬೇಕಾಗಿದೆ’ ಎಂದು ಜಿನ್ ಪಿಂಗ್ ಹೇಳಿದ್ದಾರೆ. ಕೊರೊನಾ ವೈರಸ್ ದಾಳಿ ಚೀನಾದ ಆರ್ಥಿಕತೆಯನ್ನು ಅಲ್ಲಾಡಿಸಿದೆ. ಅದರ ಬೆನ್ನಲ್ಲೇ ವಿಪರೀತ ಪ್ರವಾಹದಿಂದ ಬಹುತೇಕ ಬೆಳೆ ನಾಶವಾಗಿದ್ದು, ಆಹಾರ ಪದಾರ್ಥಗಳ ಮೆಲೆ ಗಗನಕ್ಕೇರಿದೆ. ಈ ಸಂದರ್ಭದಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯುವುದು ಮುಖ್ಯ ಗುರಿಯಾಗಿದೆ ಎಂದು ಜಿನ್ ಪಿಂಗ್ ಹೇಳಿದ್ದಾರೆ.

Leave a Reply

Your email address will not be published. Required fields are marked *