ಗುಬ್ಬಿ: ಕೋವಿಡ್ ನಿಂದ ಸಾವನ್ನಪ್ಪಿದ ಪತ್ರಕರ್ತನಿಗೆ ಶ್ರದ್ಧಾಂಜಲಿ

ಗುಬ್ಬಿ: ತಾಲೂಕಿನ ಪ್ರಜಾವಾಣಿ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದ ಎಸ್.ಹೆಚ್. ಜಯಣ್ಣ(37) ಕೋವಿಡ್ 19 ವೈರಸ್ ಗೆ ತುತ್ತಾಗಿ ತೀವ್ರ ಅಸ್ವಸ್ಥರಾಗಿ ನಿನ್ನೆ ರಾತ್ರಿ ಅಸು ನೀಗಿದ್ದಾರೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಪದವಿಪೂರ್ವ ಜಿಲ್ಲಾ ಉಪನಿರ್ದೇಶಕರಾದ ಎಚ್. ಕೆ ನರಸಿಂಹಮೂರ್ತಿ, 10 ವರ್ಷದ ಬಾಲಕನಿದ್ದಾಗಲೇ ಪತ್ರಿಕೆಗಳನ್ನು ಮನೆಮನೆಗೆ ಹಂಚುತ್ತಿದ್ದ ಜಯಣ್ಣ ಆನಂತರ ಪದವಿ ಪಡೆದು ಪ್ರಜಾವಾಣಿ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು ತುಂಬಾ ಸರಳ ವ್ಯಕ್ತಿತ್ವ ಹೊಂದಿದ್ದರು. ಬಡತನದ ಬೇಗೆಯಲ್ಲಿ ಅರಳಿದ ಈ ವ್ಯಕ್ತಿ ಸ್ನೇಹಜೀವಿಯಾಗಿ 25 ವರ್ಷಗಳ ಕಾಲ ಪೇಪರ್ ವಿತರಣೆ ನಡೆಸಿಕೊಂಡು ಜೀವನ ನಿರ್ವಹಣೆ ಮಾಡಿದ್ದರು. ಪೇಪರ್ ಹಂಚುವ ಜೊತೆಯಲ್ಲೇ ಎಂ.ಎ. ಅರ್ಥಶಾಸ್ತ್ರ ಸ್ನಾತ್ತಕೋತ್ತರ ಪದವಿ ಮಾಡಿ ನೂರಾರು ಮಕ್ಕಳಿಗೆ ಉಪನ್ಯಾಸ ನಡೆಸಿ ಉತ್ತಮ ಶಿಕ್ಷಕನಾಗಿ ಗುರುತಿಸಿಕೊಂಡಿದ್ದರು. ಇಂತಹ ವ್ಯಕ್ತಿಯ ಅಕಾಲಿಕ ಮರಣ ತೀವ್ರ ನೋವು ತಂದಿದೆ ಎಂದರು.
ವಿವೇಕಾನಂದ ವಿದ್ಯಾಸಂಸ್ಥೆ ಕಾರ್ಯದರ್ಶಿ ಅರುಣ್ ಕುಮಾರ್ ಮಾತನಾಡಿ ನಮ್ಮ ಸಂಸ್ಥೆಯಲ್ಲಿ ಐದು ವರ್ಷ ಶಿಕ್ಷಕನಾಗಿ ಕೆಲಸ ಮಾಡಿದ್ದ ಜಯಣ್ಣ ಅವರು ಉತ್ತಮ ಬೋಧನೆ ನೀಡಿ ನೂರಾರು ಶಿಷ್ಯರಿಗೆ ದಾರಿ ದೀಪವಾಗಿದ್ದರು. ಅವರ ಕುಟುಂಬಕ್ಕೆ ನೆರವು ನೀಡುವ ದೃಷ್ಟಿಯಿಂದ ಆತನ ಮಗುವಿಗೆ ಉಚಿತ ಶಿಕ್ಷಣ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ ರಾಜೇಶ್ ಗುಬ್ಬಿ, ಸಾಮಾಜಿಕ ಕಾರ್ಯಕರ್ತ ನಾಗಸಂದ್ರ ವಿಜು ಕುಮಾರ್, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಆಂಜಿನಪ್ಪ ಸೇರಿದಂತೆ ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *