`ಗಲಭೆಕೋರರನ್ನು ಗುಂಡಿಕ್ಕಿ ಕೊಲ್ಲಿ’

ಬೆಳಗಾವಿ: ಬೆಂಗಳೂರಿನ ಕಾಡುಗೊಂಡನಹಳ್ಳಿ ಮತ್ತು ದೇವರ ಜೀವನಹಳ್ಳಿಯಲ್ಲಿ ಗಲಭೆ ಮಾಡಿರುವವರನ್ನು ಸ್ಥಳದಲ್ಲೇ ಗುಂಡಿಕ್ಕಿ ಕೊಲ್ಲಿ ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಸಚಿವರು ಬೆಂಗಳೂರು ಗಲಭೆ ವ್ಯವಸ್ಥಿತವಾಗಿ ನಡೆದಿರುವ ಸಂಚು ಎಂದರು. ಶಾಸಕರ ಮನೆ, ಪೊಲೀಸ್ ಠಾಣೆ, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಇದು ದೇಶದ್ರೋಹಿಗಳ ಕೃತ್ಯ ಎಂದರು.
ರಾಜ್ಯ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಬಿಂಬಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಈ ಹಿಂದೆ ರೈಲಿಗೆ ಬೆಂಕಿ ಹಚ್ಚಿದ ಸಂದರ್ಭದಲ್ಲಿ ಪೊಲೀಸರಲ್ಲಿ ಗಲಭೆಕೋರರ ಮೇಲೆ ಶೂಟ್ ಮಾಡಲು ನಾನೇ ಹೇಳಿದ್ದೆ ಎಂದು ಸಚಿವ ಸುರೇಶ್ ಅಂಗಡಿ ಹೇಳಿದರು. ಅಲ್ಲದೇ ಬೆಂಗಳೂರಿನಲ್ಲಿ ಬೆಂಕಿ ಹಚ್ಚಿದವರಿಗೆ ಪೊಲೀಸರು ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿದರು. ಬೆಂಗಳೂರಿನಲ್ಲಿ ನಡೆದ ಘಟನೆ ನಿಭಾಯಿಸಲು ರಾಜ್ಯ ಸರ್ಕಾರ ಸಮರ್ಥವಾಗಿದೆ. ಸಿಎಂ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೋಮ್ಮಾಯಿ ಸಮರ್ಥರಿದ್ದಾರೆ ಎಂದರು. ಸಮುದಾಯದ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದಲ್ಲಿ ಸೈಬರ್ ಕ್ರೈಂ ಪೊಲೀಸರಿಗೆ ಈ ಬಗ್ಗೆ ದೂರು ನೀಡಬಹುದಿತ್ತು. ಪೊಲೀಸರು ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುತ್ತಿದ್ದರು. ಅದನ್ನು ಬಿಟ್ಟು ಗಲಭೆಗೆ ಕಾರಣವಾಗಿದ್ದು ಖಂಡನೀಯ ಎಂದು ಅಂಗಡಿ ಹೇಳಿದರು.

Leave a Reply

Your email address will not be published. Required fields are marked *