ಗಣೇಶ ಹಬ್ಬಕ್ಕೆ ಸರಕಾರದ ಮಾರ್ಗಸೂಚಿ ಅನುಸರಿಸಲು ಡಿವೈಎಸ್ಪಿ ಕರೆ

ಗುಬ್ಬಿ: ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಗೌರಿಗಣೇಶ ಹಬ್ಬ ಸರಳವಾಗಿ ಶ್ರದ್ಧಾಭಕ್ತಿಯಿಂದ ಆಚರಿಸಲು ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಅನುಸರಿಸಿ ಸಾರ್ವಜನಿಕರು ಸಹಕರಿಸಬೇಕು ಎಂದು ಶಿರಾ ಡಿವೈಎಸ್ಪಿ ಕುಮಾರಪ್ಪ ಮನವಿ ಮಾಡಿದರು. ಪಟ್ಟಣದ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಗೌರಿಗಣೇಶ ಮತ್ತು ಮೊಹರಂ ಹಬ್ಬದ ಶಾಂತಿಸಭೆಯಲ್ಲಿ ಮಾತನಾಡಿದ ಅವರು ಈ ಬಾರಿ ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಬಗ್ಗೆ ಹಲವು ನಿಬಂಧನೆ ಸರ್ಕಾರ ವಿಧಿಸಿದೆ. ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಯಲ್ಲಿ 4 ಅಡಿಗಳನ್ನು ಮೀರದ ವಿಗ್ರಹ ಇಡಬೇಕಿದೆ. ಅತ್ಯಂತ ಸರಳ ಪೂಜಾ ಕಾರ್ಯಕ್ರಮ ನಡೆಸಿ ಹಬ್ಬವನ್ನು ಜಾಗೃತಿಯೊಂದಿಗೆ ಅಚರಿಸಬೇಕು ಎಂದರು.
ಪ್ರತಿ ಗಲ್ಲಿ ಗಲ್ಲಿಗೆ ಗಣೇಶ ಪ್ರತಿಷ್ಠಾಪನೆ ಮಾಡದೆ ವಾರ್ಡ್ಗೆ ಒಂದರಂತೆ ಗಣೇಶ ವಿಗ್ರಹ ಇಟ್ಟು ವಿಸರ್ಜನಾ ಮಹೋತ್ಸವವನ್ನು ಯಾವುದೇ ಮೆರವಣಿಗೆ ಇಲ್ಲದೆ ಮಾಡಬೇಕೆಂದ ಅವರು ಡಿಜೆ ಕುಣಿತ, ರಸಸಂಜೆ, ಆಕ್ರ್ರೇಸ್ಟ್ರಾ ನಡೆಸುವಂತಿಲ್ಲ. ಪಕ್ಷಕ್ಕೆ ಸೀಮಿತವಾಗಿ ವೇದಿಕೆ ಸೃಷ್ಟಿಸಿ ಗೊಂದಲ ಮೂಡಿಸದೇ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಹಬ್ಬ ಆಚರಿಸಿ ಸರ್ಕಾರದ ಕಾಳಜಿಯಂತೆ ನಿಬಂಧನೆಗಳಿಗೆ ಸಹಕರಿಸಿ ಹಬ್ಬ ನಡೆಸಿ ಎಂದರು. ಗಣೇಶಮೂರ್ತಿ ಮಾರಾಟಕ್ಕೆ ಅನುವು ಮಾಡಲಾಗಿದೆ. ಆದರೆ ರಸ್ತೆ ಸಂಚಾರಕ್ಕೆ ತೊಂದರೆ ನೀಡದೆ ನಾಲ್ಕು ಅಡಿಗಳಿಗಿಂತ ಕಡಿಮೆ ಎತ್ತರ ಗಣೇಶವಿಗ್ರಹ ಮಾರಾಟ ಮಾಡಲು ಸೂಚಿಸಿದೆ. ಪರಿಸರಸ್ನೇಹಿ ವಿಗ್ರಹಕ್ಕೆ ಮಾನ್ಯತೆ ನೀಡಿ ಅನ್ನದಾಸೋಹ ಕಾರ್ಯಕ್ರಮ ನಡೆಸದೆ ಪೂಜಾ ವಿಧಾನ ನಡೆಸಿ ಗಣೇಶ ವಿಸರ್ಜನೆ ನಡೆಸಬೇಕಿದೆ. ಕೆರೆಕಟ್ಟೆಗಳಿಗೆ ಹೋಗದೆ ಸಮೀಪದಲ್ಲೇ ಕೃತಕ ಶೇಖರಣೆ ಮಾಡಿ ನೀರಿಗೆ ವಿಸರ್ಜನೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಪಟ್ಟಣದ ಕೆಲ ಸಮಸ್ಯೆ ಬಗ್ಗೆ ಮುಖಂಡರು ಚರ್ಚಿಸಿದರು. ಸಿಪಿಐ ಸಿ.ರಾಮಕೃಷ್ಣಯ್ಯ ಗೌರಿಗಣೇಶ ಹಬ್ಬದ ಮಾರ್ಗಸೂಚಿಯನ್ನು ವಿವರಿಸಿ ತಿಳಿಸಿದರು. ಪಪಂ ಸದಸ್ಯರಾದ ಮಹಮದ್ ಸಾದಿಕ್, ಶೌಕತ್ಆಲಿ, ತಾಪಂ ಸದಸ್ಯ ಅ.ನ.ಲಿಂಗಪ್ಪ, ಪಪಂ ಮಾಜಿ ಉಪಾಧ್ಯಕ್ಷ ಜಿ.ಸಿ.ನರಸಿಂಹಮೂರ್ತಿ, ಮುಖಂಡರಾದ ಎಸ್.ಎಲ್.ನರಸಿಂಹಯ್ಯ, ಸಿ.ಆರ್.ಶಂಕರ್ಕುಮಾರ್, ಲೋಕೇಶ್, ನಾಗಸಂದ್ರ ವಿಜಯ್ಕುಮಾರ್, ವಿನಯ್, ಮಧು, ಭೀಮಶೆಟ್ಟಿ, ಜಿ.ವಿ.ಮಂಜುನಾಥ್, ಗುಬ್ಬಿ ಪಿಎಸ್ಐ ಜ್ಞಾನಮೂರ್ತಿ, ಚೇಳೂರು ಪಿಎಸ್ಐ ವಿಜಯ್ಕುಮಾರ್, ಸಿ.ಎಸ್.ಪುರ ಪಿಎಸ್ಐ ನಾಗರಾಜು, ಗುಬ್ಬಿ ಠಾಣಾ ಪಿಎಸ್ಐ ರಾಜಣ್ಣ ಇತರರು ಇದ್ದರು.