ಕೋಮುಗಲಭೆಗೆ ಮೂಲವಾಗುವ ರಾಜಕಾರಣ ಸಲ್ಲದು -ಮಸಾಲ ಜಯರಾಂ

ಗುಬ್ಬಿ: `ತಾನು ಬೆಳೆಸಿದ ಮರ ತನ್ನ ಮೇಲೆ ಬಿದ್ದಿರುವ ರೀತಿ ಬೆಂಗಳೂರಿನಲ್ಲಿ ನಡೆದ ಗಲಭೆ ಕುರಿತು ಶಾಸಕ ಅಖಂಡ ಶ್ರೀನಿವಾಸ್ ಯೋಚಿಸಬೇಕಿದೆ. ವಿನಾಕಾರಣ ಕೋಮು ಗಲಭೆಗೆ ಮೂಲವಾಗುವ ರಾಜಕಾರಣ ಸಲ್ಲದು. ಇದರಿಂದ ಶ್ರೀಸಾಮಾನ್ಯರಲ್ಲಿ ಆತಂಕ ಮನೆ ಮಾಡುತ್ತದೆ’ ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ತಿಳಿಸಿದರು. ತಾಲ್ಲೂಕಿನ ಸಿ.ಎಸ್.ಪುರ ಗದ್ದೇಹಳ್ಳಿಯಲ್ಲಿ ಇಂದು ನಡೆದ 1.25 ಕೋಟಿ ರೂಗಳ ಸಿಸಿ ರಸ್ತೆ ನಿರ್ಮಾಣ ಹಾಗೂ 11 ಲಕ್ಷ ರೂಗಳ ಶಾಲಾ ಕೊಠಡಿ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಬಿಜೆಪಿ ಸರ್ಕಾರದ ಬಂದ ದಿನದಿಂದ ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ. ನಡೆದ ಕೆಲ ಘಟನೆಗಳು ರಾಜಕೀಯ ಪ್ರೇರಿತವಾಗಿವೆ ಅಷ್ಟೇ. ಈ ಘಟನೆಯಲ್ಲೂ ಅವರ ಜನರೇ ಅವರಿಗೆ ತಿರುಗಿ ಬಿದ್ದಿದ್ದಾರೆ. ಈ ಘಟನೆಯು ಮತ್ತೊಂದು ತಿರುವು ಪಡೆಯುವ ಮುನ್ನ ತಪ್ಪಿತಸ್ಥರನ್ನು ಹುಡುಕಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮುಂದುವರೆದು ಎಲ್ಲಿಯೋ ಇಂತಹ ಘಟನೆ ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮವಹಿಸಲಾಗಿದೆ ಎಂದರು.
ತುರುವೇಕೆರೆ ಕ್ಷೇತ್ರ ಅಭಿವೃದ್ಧಿಗೆ ಕೋಟ್ಯಾಂತರ ರೂಗಳ ಅನುದಾನವನ್ನು ವಿವಿಧ ಇಲಾಖೆಯಿಂದ ತರಲಾಗಿದೆ. ಕೋವಿಡ್ ಇಲ್ಲದ್ದಿದ್ದರೆ ಮತ್ತಷ್ಟು ಅಭಿವೃದ್ದಿ ಕೆಲಸಗಳು ಪೂರ್ಣಗೊಳ್ಳುತಿತ್ತು. ಈಗಾಗಲೇ ಕೊಟ್ಟ ಮಾತಿನಂತೆ ಗದ್ದೇಹಳ್ಳಿಯನ್ನು ಮಣ್ಣು ಮುಕ್ತ ಗ್ರಾಮವಾಗಿ ಮಾರ್ಪಾಡು ಮಾಡಿದ್ದೇವೆ. 1.25 ಕೋಟಿ ಕೆಲಸಕ್ಕೆ ಚಾಲನೆ ನೀಡಲಾಗಿದ್ದು ಶೀಘ್ರದಲ್ಲಿ ಯಡನಹಳ್ಳಿಯಲ್ಲಿ 50 ಲಕ್ಷ ರೂ ಸಿಸಿ ರಸ್ತೆ, ಉಂಗ್ರ, ಚೆಂಗಾವಿ, ಮಣೆಕುಪ್ಪೆ ಗ್ರಾಮಕ್ಕೂ ರಸ್ತೆ ಕೆಲಸ ಆರಂಭವಾಗಲಿದೆ. ಕಲ್ಲೂರು ಗ್ರಾಮದಲ್ಲಿ 6 ಕೋಟಿ ರೂಗಳ ಕೆಲಸ ನಡೆದಿದೆ. ಮಾಯಸಂದ್ರ ಗ್ರಾಮದಲ್ಲೂ 3 ಕೊಟಿ ಕೆಲಸ ನಡೆದಿದೆ ಎಂದರು.
ಹೇಮಾವತಿ ನೀರು ಜಿಲ್ಲೆಗೆ ಪಾದಾರ್ಪಣೆ ಮಾಡಿದೆ. ಶಿರಾ ಶಾಸಕ ಸತ್ಯನಾರಾಯಣ್ ಸಾವನ್ನಪ್ಪಿದ ಹಿನ್ನಲೆ ಅವರಿಗೆ ಶ್ರದ್ಧಾಂಜಲಿಯನ್ನು ನೀರು ಹರಿಸುವ ಮೂಲಕ ಬಿಜೆಪಿ ಸರ್ಕಾರ ಸಮರ್ಪಿಸಿದೆ. 15 ದಿನಗಳ ಕಾಲ ಶಿರಾಕ್ಕೆ ನೀರು ಹರಿಸಿ ನಂತರ ತುರುವೇಕೆರೆ ಭಾಗಕ್ಕೆ ಹರಿಸಲಾಗುವುದು. ಈ ಬಾರಿ ಎಲ್ಲಾ ಕೆರೆಗಳಿಗೆ ನೀರು ಹರಿಸಲಾಗುವುದು ಎಂದ ಅವರು ದೊಳ್ಳೇನಹಳ್ಳಿಪಾಳ್ಯ ಗ್ರಾಮದಲ್ಲಿ ಪಾಸಿಟೀವ್ ಪ್ರಕರಣ ಬಂದ ಹಿನ್ನಲೆ ಸೀಲ್‍ಡೌನ್ ಪಕ್ರಿಯೆ ಅಧಿಕಾರಿಗಳ ನಡೆಸಿದ್ದಾರೆ. ಯಾವುದೇ ತಾರತಮ್ಯ ಇಲ್ಲದೇ ಕೆಲಸ ನಡೆಸಲಾಗಿದೆ. ವಿನಾಕಾರಣ ದೂರಿದ ಕಾಂಗ್ರೆಸ್ ಮುಖಂಡರು ಚೆಂಗಾವಿ ಗ್ರಾಮವನ್ನೇ ನೋಡಿಲ್ಲ. ಇಲ್ಲಿನ ಘಟನೆ ಬಗ್ಗೆ ತಿಳಿದಿಲ್ಲ. ಪಾಸಿಟೀವ್ ಬಂದಿರುವ ವ್ಯಕ್ತಿ ನಮ್ಮ ಪಕ್ಷದವರು ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಬಿ.ಎಸ್.ನಾಗರಾಜು, ಇಡಗೂರು ರವಿ, ಮಹೇಶ್, ಲಕ್ಷ್ಮೀದೇವಿ ಭದ್ರೇಗೌಡ, ನರಸೇಗೌಡ, ಪಾಪಣ್ಣ, ಚಂದ್ರೇಗೌಡ, ಜಿ.ಆರ್.ರಾಮಯ್ಯ, ಅಡಕೆ ವೆಂಕಟಪ್ಪ, ಪಂಚಾಯತ್ ರಾಜ್ ಎಇಇ ಶ್ರೀಪಾದ್, ಎಇ ಚಿದಾನಂದ್ ಇತರರು ಇದ್ದರು.

Leave a Reply

Your email address will not be published. Required fields are marked *