ಕೊಡಗಿನಲ್ಲೊಬ್ಬ ಅಪರೂಪದ ಪಕ್ಷಿತಜ್ಞ ಹೆಚ್.ಆರ್.ಗಣೇಶ್

ಮಡಿಕೇರಿ: ಪಕ್ಷಿ ತಜ್ಞ ಸಲೀಂ ಅಲಿ ನಿಮಗೆ ಗೊತ್ತು. ಅದರೆ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಎಲೆಮರೆಯ ಕಾಯಿಯಂತಿರುವ ಪಕ್ಷಿ ತಜ್ಞ ಹೆಚ್.ಆರ್.ಗಣೇಶ್ ಗೊತ್ತಿರಲು ಸಾಧ್ಯವೇ ಇಲ್ಲ. ಏಕೆಂದರೆ ಈ ತಜ್ಞ ಇನ್ನೂ ಜಿಲ್ಲೆಯ ಜನತೆಗೇ ಪರಿಚಯವಾಗಿಲ್ಲ. ಏಕೆ ಗೊತ್ತೆ? ಇವರು ಪ್ರಚಾರದಿಂದ ತುಂಬಾ ದೂರ. ಕೃಷಿಕರಾಗಿರುವ ಗಣೇಶ್ ಸಿದ್ದಾಪುರ ಸಮೀಪದ ನೆಲ್ಲಿ ಹುದಿಕೇರಿಯವರು. ಮೊದಲು ರೆಸಾರ್ಟ್ ಒಂದರಲ್ಲಿ ಪ್ರವಾಸಿ ಗೈಡ್ ಆಗಿ ಕೆಲಸ ಮಾಡುತ್ತಿದ್ದ ಇವರು ಇದೀಗ ಕೆಲಸ ಬಿಟ್ಟು ಕೃಷಿಯ ಜತೆಗೆ ಅಸಕ್ತರಿಗೆ ಪಕ್ಷಿಯ ಗೈಡ್ ಕೂಡ ಅಗಿ ಕೆಲಸ ಮಾಡುತಿದ್ದಾರೆ.
ಗಣೇಶ್ ಕಳೆದ 20 ವರ್ಷಗಳಿಂದ ಪಕ್ಷಿಗಳ ಕುರಿತು ಸಾಕಷ್ಟು ಮಾಹಿತಿ ಕಲೆಹಾಕಿದ್ದಾರೆ. ಮೊದಲಿನಿಂದಲೂ ವನ್ಯಪ್ರೇಮಿಯಾದ ಇವರಿಗೆ ಪಕ್ಷಿಗಳೆಂದರೆ ತುಂಬ ಅಕ್ಕರೆ. ಗಣೇಶ್ ಅಂದಾಜಿಸಿದಂತೆ ಕೊಡಗಿನಲ್ಲಿ 302 ವಿವಿಧ ರೀತಿಯ ಹಕ್ಕಿಗಳಿವೆ. ಸಾಮಾನ್ಯವಾಗಿ ಪಶ್ಚಿಮಘಟ್ಟದಲ್ಲಿ ಕಂಡುಬರುವ ಹಕ್ಕಿಗಳ ಪೈಕಿ ರಾಜ್ಯದ ಅಧಿಕ ಹಕ್ಕಿಗಳು ಕೊಡಗಿನಲ್ಲೇ ಇರುವುದು ವಿಶೇಷವಾಗಿರುವುದರಿಂದ ಇವರ ಅಧ್ಯಾಯನಕ್ಕೆ ಸ್ಫೂರ್ತಿಯಾಗಿದೆ. ಗ್ರೇಟ್ ಪೈಡ್ ಹಾರ್ನ್ ಬಿಲ್, ಬ್ಲು ವಿಂಗ್ ಪ್ಯಾರಕೀಟ್, ಗ್ರೆ ಹೆಡೆಡ್ ಬುಲ್ ಬುಲ್, ವೈಟ್ ಬೆಲ್ಲೀಡ್ ಟ್ರೀಪೈ, ಬ್ಲಾಕ್ ಈಗಲ್, ಬೆಲ್ಲಿಡ್ ಬ್ಲು ಫ್ಲೈ ಕ್ಯಾಚರ್ ಮತ್ತು ಸಿಲೋನ್ ಫ್ರಾಗ್ ಮೌತ್ ಜಿಲ್ಲೆಯ ಪ್ರಮುಖ ಹಕ್ಕಿಗಳ ಪರಿಚಯ ಇವರಿಗಿದೆ. ಇಂತಹ ಹಕ್ಕಿಗಳು ಜಿಲ್ಲೆಯ ಕಕ್ಕಬೆ, ಶಾಂತಳ್ಳಿ, ಪೆರುಂಬಾಡಿ, ದುಬಾರೆ, ರಂಗಸಮುದ್ರ ಸೇರಿದ ಪಶ್ಚಿಮ ಘಟ್ಟಗಳು ಇವರ ಪ್ರಮುಖ ಪ್ರದೇಶಗಳು. ಪಕ್ಷಿ ವೀಕ್ಷಣೆಗೆ ಯಾರಾದರೂ ಇಚ್ಛೆಪಟ್ಟಲ್ಲಿ ಅವರನ್ನು ಆಯಾ ಪ್ರದೇಶಗಳಿಗೆ ಕರೆದೊಯುತ್ತಾರೆ. ಬೆಳಗ್ಗೆ 6ರಿಂದ 10.30ರ ವರೆಗೆ ಪಕ್ಷಿ ವೀಕ್ಷಣೆ ಮತ್ತು ಛಾಯಾಗ್ರಹಣಕ್ಕೆ ಸೂಕ್ತ ಸಮಯವಾದ ಕಾರಣ ಪ್ರವಾಸಿಗರಿಗೆ ಮತ್ತು ವನ್ಯ ಜೀವಿ ಛಾಯಾಗ್ರಾಹಕರಿಗೆ ಒಂದು ದಿನದ ಮುಂಚಿತವಾಗಿ ಮಾಹಿತಿ ನೀಡಿ ಕಾಡಿಗೆ ತೆರಳಿಬಿಡುತ್ತಾರೆ. ಬೆಳಗಿನ ಹೊತ್ತಿನಲ್ಲಿ ಹಕ್ಕಿಗಳ ಸಂವಹನ, ಮರಿಗಳು-ತಾಯಿ ಒಡನಾಟ, ಗೂಡು ನಿರ್ಮಾಣ, ಹೆಣ್ಣು-ಗಂಡು ಹಕ್ಕಿಗಳ ಆಹಾರ ಬೇಟೆ ಮುಖ್ಯವಾಗಿದ್ದು ಅವುಗಳ ವರ್ಗ, ಆಹಾರ ಪದ್ಧತಿ ಹೀಗೆ ಅಧ್ಯಯನ ಜೊತೆ ಜೊತೆಗೆ ಕಾರ್ಯ ನಿರ್ವಹಿಸುತ್ತಾರೆ. 30 ವರ್ಷಗಳ ಹಿಂದೆ ಆಂಧ್ರ ಪ್ರದೇಶದ ರಿಶಿ ವ್ಯಾಲಿ ಎನ್ನುವಲ್ಲಿ ಪಕ್ಷಿಗಳು ಮತ್ತು ವೀಕ್ಷಣೆ ಕುರಿತು ವಿಶೇಷ ತರಬೇತಿ ಪಡೆದು ಡಾ.ಸಲೀಂ ಅಲಿ ಪ್ರೇರಣೆಯಿಂದ ತನ್ನ ಹವ್ಯಾಸದ ಜೊತೆಗೆ ಸಂಶೋಧನೆ ಮತ್ತು ಗೈಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉತ್ತಮ ಫೋಟೋ ಗ್ರಾಫರ್ ಕೂಡ ಆಗಿರುವುದರಿಂದ ಇವರ ಬಳಿ ಬಹುತೇಕ ಕೊಡಗಿನ ಹಕ್ಕಿಗಳ ಚಿತ್ರಗಳಿದೆ.
ಜಿಲ್ಲೆಯ 240 ಹಕ್ಕಿಗಳ ಕರೆಗಳನ್ನು ಗುರುತ್ತಿಸುತ್ತಾರೆ. ಇವುಗಳಲ್ಲಿ 30 ಹಕ್ಕಿಗಳ ಧ್ವನಿಯನ್ನು ಸ್ವತಃ ತಾವೇ ಮಾಡುತ್ತಾರೆ. ಹಕ್ಕಿ ವೀಕ್ಷಣೆಗೆ ಹೋಗುವ ಸಂದರ್ಭ ಹೆಣ್ಣು ಇಲ್ಲವೇ ಗಂಡು ಹಕ್ಕಿಯನ್ನು ತನ್ನ ಬೈನ್ಯಾಕ್ಯುಲರ್ ನಲ್ಲಿ ಗುರುತಿಸಿ ಅವುಗಳ ಸಂಗಾತಿಯನ್ನು ಕರೆಯುತ್ತಾರೆ. ಕೆಲಹೊತ್ತಿನಲ್ಲೇ ಆ ಹಕ್ಕಿಗಳು ಪ್ರತ್ಯಕ್ಷವಾಗುವುದು ಇವರಿಗೆ ಹಕ್ಕಿಗಳ ಮೇಲೆ, ಅವುಗಳ ಸ್ವರದ ಮೇಲೆ ಇರುವ ಹಿಡಿತಕ್ಕೆ ಇರುವ ಕೈಗನ್ನಡಿ. ಕೊಡಗಿನಲ್ಲಿ ಅಪರೂಪದ ಹಕ್ಕಿಗಳ ಪ್ರಭೇದಗಳಿವೆ. ಕೆಲವೊಂದು ದಿನನಿತ್ಯ ಕಾಣಸಿಗುವ ಪಟ್ಟಣ ಮತ್ತು ಮನೆ ಸುತ್ತಮುತ್ತಲಿನ ಹಕ್ಕಿಗಳಾದರೆ ದಟ್ಟಾರಣ್ಯ, ಬಯಲುಸೀಮೆ, ಹುಲ್ಲುಗಾವಲು, ಕೃಷಿ ಪ್ರದೇಶ ಹೀಗೆ ಹತ್ತು ಹಲವು ಬಗೆಯ ಸ್ಥಳಗಳಲ್ಲಿ ನಶಿಸಿರುವ ಮತ್ತು ಅಳಿವಿನ ಅಂಚಿನಲ್ಲಿರು ಹಕ್ಕಿಯ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಇದೀಗ ಪಶ್ಚಿಮ ಘಟ್ಟದಲ್ಲಿರುವ ಅಪರೂಪದ ಹಕ್ಕಿಯ ಬಗ್ಗೆ ಮಾಹಿತಿ ಪಡೆದಿರುವ ಇವರು ಕೊರೊನಾ ಹಿನ್ನಲೆಯಲ್ಲಿ ಅರಣ್ಯಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ ದಟ್ಟಾರಣ್ಯದಲ್ಲಿ ಅದರಲ್ಲೂ ನಿಶಾಚಾರಿಯಾಗಿರುವ ಈ ಹಕ್ಕಿಯನ್ನು ಗುರುತಿಸಿ, ಹೊರ ಪ್ರಪಂಚಕ್ಕೆ ತಿಳಿಸುವ ಗುರಿಯನ್ನು ಹೊಂದಿದ್ದಾರೆ. ಬದಲಾಗುತ್ತಿರುವ ತಂತ್ರಜ್ಞಾನ, ಮೂಬೈಲ್ ತರಂಗ, ಹವಮಾನ ವೈಪರೀತ್ಯ, ಕೃಷಿ ಜಮೀನಿನಲ್ಲಿ ವಿಷಕಾರಿ ಔಷಧಿ ಸಿಂಪಡನೆ ಹೀಗೆ ಹತ್ತು ಹಲವು ಕಾರಣದಿಂದ ಹಚ್ಚ ಹಸುರಿನ ಕಾಡುಗಳು ಕಾಂಕ್ರಿಟ್ ಕಾಡುಗಳಾಗಿ ಪರಿವರ್ತಿತವಾಗಿವೆ. ಇದೆಲ್ಲ ನಡುವೆಯೂ ಪಕ್ಷಿ ಸಂಕುಲದ ಜೀವ ವೈವಿಧ್ಯ ಇರುವುದು ನಮ್ಮ ಅದೃಷ್ಟ ಎನ್ನಬಹುದು.

#ಕೋವರ್ ಕೊಲ್ಲಿ ಇಂದ್ರೇಶ್

Leave a Reply

Your email address will not be published. Required fields are marked *