ಕೇರಳ ಗೋಲ್ಡ್ ಹಗರಣದ `ಸಾಕ್ಷ್ಯನಾಶ’: ವಿಪಕ್ಷಗಳ ಆರೋಪ

ತಿರುವನಂತಪುರ: ಕೇರಳ ರಾಜ್ಯ ಸಚಿವಾಲಯದಲ್ಲಿ ನಿನ್ನೆ ಸಂಜೆ ಸಂಭವಿಸಿದ ಅಗ್ನಿ ಆಕಸ್ಮಿಕ ಘಟನೆಯು ಗೋಲ್ಡ್ ಹಗರಣದ ಸಾಕ್ಷ್ಯನಾಶದ ಯತ್ನ ಎಂದು ಪ್ರತಿಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಆರೋಪಿಸಿವೆ. ಸ್ಥಳದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ವಿ. ಮುರಳೀಧರನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಸೇರಿ ಹಲವು ಕೋಲಾಹಲದ ಕ್ಷಣಗಳಿಗೆ ಸಚಿವಾಲಯ ಸಾಕ್ಷಿಯಾಯಿತು. ಕಾಂಗ್ರೆಸ್‍ನ ರಮೇಶ್ ಚೆನ್ನಿತ್ತಲ ಅವರಿಗೆ ತೀವ್ರ ಪ್ರತಿಭಟನೆಯ ಬಳಿಕ ಅಗ್ನಿ ಆಕಸ್ಮಿಕ ಸಂಭವಿಸಿದ ಪ್ರದೇಶಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಅವರು, `ವಿದೇಶ ಪ್ರವಾಸ ಮತ್ತು ಗಣ್ಯ ವ್ಯಕ್ತಿಗಳಿಗೆ ಸಂಬಂಧಿಸಿದ ಕಡತಗಳು ಹಾನಿಗೊಳಗಾದವುಗಳಲ್ಲಿ ಸೇರಿವೆ ಎಂಬುದು ಹಿರಿಯ ಅಧಿಕಾರಿಗಳು ನೀಡಿರುವ ಮಾಹಿತಿಯಿಂದ ತಿಳಿದುಬಂದಿದೆ. ಹೀಗಾಗಿ ಘಟನೆಯು ಚಿನ್ನ ಕಳ್ಳಸಾಗಣೆ ಮತ್ತು ಅದಕ್ಕೆ ಸಂಬಂಧಿತ ಇತರ ತನಿಖೆಗಳಿಗೆ ಅಡ್ಡಿ ಉಂಟುಮಾಡಲು ಹೂಡಿದ ವ್ಯವಸ್ಥಿತ ಸಂಚು’ ಎಂದು ಆರೋಪಿಸಿದ್ದಾರೆ.
ಆಡಳಿತ ಕಚೇರಿಯ ರಾಜಕೀಯ ವಿಭಾಗದಲ್ಲಿ ಸಂಜೆ 4.45ರ ವೇಳೆಗೆ ಬೆಂಕಿ ಕಾಣಿಸಿಕೊಂಡಿತ್ತು. ರಾಜತಾಂತ್ರಿಕ ಮಾರ್ಗದ ಮೂಲಕ ರಾಜ್ಯಕ್ಕೆ ತರಲಾದ ಸರಕುಗಳ ಮಾಹಿತಿಯನ್ನು ಒದಗಿಸುವಂತೆ ಪ್ರಧಾನ ಆಡಳಿತ ಕಚೇರಿ ಅಧಿಕಾರಿ ಬಳಿ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯ ಕೇಳಿದ್ದವು ಎಂದು ಇತ್ತೀಚೆಗೆ ವರದಿಯಾಗಿತ್ತು. ಸಚಿವಾಲಯದ ಸಿಸಿಟಿವಿ ದೃಶ್ಯಾವಳಿಗಳನ್ನೂ ಒದಗಿಸುವಂತೆ ಎನ್‍ಐಎ ಕೋರಿತ್ತು. ಆದರೆ ತಾಂತ್ರಿಕ ಕಾರಣ ನೀಡಿರುವ ಅಧಿಕಾರಿಗಳು ಇನ್ನೂ ಸಿಸಿಟಿವಿ ದೃಶ್ಯಾವಳಿಗಳನ್ನು ಎನ್‍ಐಎಗೆ ನೀಡಿಲ್ಲ ಎನ್ನಲಾಗಿದೆ. ಈ ಎಲ್ಲ ಕಾರಣಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಅಗ್ನಿ ಆಕಸ್ಮಿಕದ ಬಗ್ಗೆ ತೀವ್ರ ಅನುಮಾನ ವ್ಯಕ್ತಪಡಿಸಿವೆ.

Leave a Reply

Your email address will not be published. Required fields are marked *