ಕೇರಳ-ಕರ್ನಾಟಕ ಗಡಿಯಲ್ಲಿ `ಪಾಸ್ ಉಲ್ಲಂಘನಾ ಆಂದೋಲನ’ಕ್ಕೆ ಬಿಜೆಪಿ ಚಾಲನೆ!

ಉಳ್ಳಾಲ: ಅಂತಾರಾಜ್ಯ ಗಡಿ ತೆರವು ಕುರಿತು ಕೇಂದ್ರ ಸರಕಾರದ ಸ್ಪಷ್ಟ ಆದೇಶವಿದ್ದರೂ ಕೇರಳ-ಕರ್ನಾಟಕ ಗಡಿಯಲ್ಲಿ ಉಭಯ ರಾಜ್ಯಗಳ ಜನಸಂಚಾರಕ್ಕೆ ಪಾಸ್ ಪಡೆಯುವ, ಸಂಚಾರಕ್ಕೆ ತಡೆಯೊಡ್ಡುವ ಸರಕಾರದ ಕ್ರಮದ ವಿರುದ್ಧ ಇಂದು ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ತಲಪಾಡಿ ದಾಟಿ ಬರುವವರಿಗಾಗಿ ಕೇರಳದ ಗಡಿಭಾಗವಾದ ತೂಮಿನಾಡಿನಲ್ಲಿ ಸ್ಥಾಪಿಸಿದ ಕ್ವಾರಂಟೈನ್ ಪರೀಶೀಲನ ಕೇಂದ್ರ ಹಾಗೂ ಬ್ಯಾರಿಕೇಡ್ ತೆರವುಗೊಳಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಅಂತಾರಾಜ್ಯ ಪಾಸ್ ಉಲ್ಲಂಘನಾ ಹೋರಾಟಕ್ಕೆ ಚಾಲನೆ ನೀಡಿದರು. ಕೇರಳ ಸರಕಾರ ಜನರಿಗೆ ಕರ್ನಾಟಕಕ್ಕೆ ಹೋಗಲು ಪಾಸ್ ಮೂಲಕ ನಿಯಂತ್ರಣ ಮಾಡುವ ಕ್ರಮದ ವಿರುದ್ಧ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ `ಪಾಸ್ ಉಲ್ಲಂಘನಾ ಆಂದೋಲನ’ ಇಂದು ಬೆಳಗ್ಗೆ ತಲಪಾಡಿ ಗಡಿಯಲ್ಲಿ ಜರಗಿತು. ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಶ್ರೀಕಾಂತ್ ಉದ್ಘಾಟಿಸಿ ಮಾತನಾಡುತ್ತಾ ಅನಗತ್ಯ ಪಾಸ್ ಮತ್ತು ನಿಯಂತ್ರಣ ಹೇರುವುದರಿಂದ ನೂರಾರು ಮಂದಿ ತಮ್ಮ ಉದ್ಯೋಗ ಮತ್ತು ವ್ಯಾಪಾರ ನಡೆಸಲಾಗದೆ ಕಷ್ಟಪಡುತ್ತಿದ್ದಾರೆ. ಆದರೂ ಕರ್ನಾಟಕಕ್ಕೆ ಮುಕ್ತ ಪ್ರವೇಶ ನಿಷೇಧಿಸಿರುವ ಕೇರಳ ರಾಜ್ಯ ಸರಕಾರದ ಜನವಿರೋಧಿ ನೀತಿಯಾಗಿದೆ ಎಂದರು.
ಬಿಜೆಪಿ ಮಂಜೇಶ್ವರ ಮಂಡಲಾಧ್ಯಕ್ಷ ಮಣಿಕಂಠ ರೈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇದರ ಅಂಗವಾಗಿ ತಲಪಾಡಿ ಕೆಳಗಿನ ಪೆಟ್ರೋಲ್ ಬಂಕ್ ಬಳಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಕೆಳಗಿನ ಟೋಲ್ ಬೂತ್ ಸುತ್ತುವರಿದು ಅಂತರಾಜ್ಯ ಗಡಿ ಸಂಪರ್ಕದ ಕೇರಳ ಪೋಲಿಸ್ ಕೇಂದ್ರದ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಬಿಜೆಪಿ ನೇತಾರರಾದ ಸುರೇಶ್ ಕುಮಾರ್ ಪೂಕಟ್ಟೆ, ಸುಧಾಮ ಗೋಸಾಡ, ನ್ಯಾಯವಾದಿ ನವೀನ್ ರಾಜ್ ಕೆ.ಜೆ., ಪದ್ಮನಾಭ ಕಡಪ್ಪರ, ಯಾದವ ಬಡಾಜೆ, ಆದರ್ಶ ಬಿ.ಎಂ. ರಾಜೇಶ್ ತೂಮಿನಾಡು, ಲೋಕೇಶ್ ಮಾಡ, ಯು.ಜಿ.ರೈ, ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಕಮ್ಯುನಿಸ್ಟರೆಂದರೆ ಕಮ್ಮಿಗಳು. ಬುದ್ಧಿ ಕಡಿಮೆ ಇರುವವರು. ಆದ್ದರಿಂದ ಕೇರಳದಲ್ಲಿ ಆಡಳಿತದಲ್ಲಿರುವುವುದು ಪೆಟ್ ಕಮ್ಮಿಗಳು. ಅವರನ್ನು ವಿರೋಧಿಸಬೇಕಾದ ವಿರೋಧಪಕ್ಷದಲ್ಲಿರುವ ಶಾಸಕರು ನಿಷ್ಕ್ರಿಯರಾಗಿದ್ದಾರೆ. ಅದನ್ನು ಓಡಿಸಲು ಬಿಜೆಪಿ ಕಟಿಬದ್ಧವಾಗಿದೆ ಎಂದು ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ಕೇರಳ ಸರಕಾರವನ್ನು ಕಟುವಾಗಿ ಟೀಕಿಸಿದರು.

Leave a Reply

Your email address will not be published. Required fields are marked *