ಕೇರಳಿಗರಿಗೆ ಗುಡ್ ನ್ಯೂಸ್! 88 ಲಕ್ಷ ಕುಟುಂಬಗಳಿಗೆ ಉಚಿತ ಓಣಂ ಕಿಟ್ ವಿತರಣೆ!!

ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಓಣಂ ಹಬ್ಬದ ಸಿದ್ಧತೆಯಲ್ಲಿರುವ ಕೇರಳಿಗರಿಗೆ ಗುಡ್ ನ್ಯೂಸ್ ನೀಡಿದ್ದಾರೆ. 88 ಲಕ್ಷ ಕುಟುಂಬಗಳಿಗೆ ಉಚಿತವಾಗಿ ಓಣಂ ದಿನಸಿ ಕಿಟ್ ವಿತರಣೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ನಾಳೆಯಿಂದಲೇ ರಾಜ್ಯದಲ್ಲಿ ಕಿಟ್ ವಿತರಣೆ ಆರಂಭವಾಗಲಿದೆ. ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ದಿನಸಿ ಕಿಟ್ ವಿತರಣೆ ಮಾಡುವುದಾಗಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ಓಣಂ ವಿಶೇಷ ಕಿಟ್‍ನಲ್ಲಿ 11 ಬಗೆಯ ದಿನಸಿ ಸಾಮಾಗ್ರಿಗಳು ಇರಲಿವೆ. ಪಡಿತರ ಚೀಟಿ ಹೊಂದಿರುವ 88 ಲಕ್ಷ ಕುಟುಂಬಗಳಿಗೆ ಉಚಿತವಾಗಿ ಕಿಟ್ ದೊರೆಯಲಿದೆ.
ರಾಜ್ಯದ 2000 ಕೇಂದ್ರಗಳಲ್ಲಿ ವಿಶೇಷ ಕಿಟ್‍ಗಳನ್ನು ಪ್ಯಾಕ್ ಮಾಡಲಾಗುತ್ತಿದೆ. ಸ್ವಯಂ ಸೇವಕರು ಕಿಟ್‍ಗಳಿಗೆ ದಿನಸಿ ಭರ್ತಿ ಮಾಡಿ, ಅವುಗಳನ್ನು ತೂಕ ಮಾಡಿದ ಬಳಿಕ ಜನರಿಗೆ ಉಚಿತವಾಗಿ ಹಂಚಿಕೆ ಮಾಡಲಾಗುತ್ತದೆ. ಕೇರಳದಲ್ಲಿನ ವಿವಿಧ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಓಣಂ ಹಬ್ಬದ ಸಂದರ್ಭದಲ್ಲಿ ದಿನಸಿ ಸರಿಯಾದ ಸಮಯಕ್ಕೆ ತಲುಪುತ್ತಿಲ್ಲ. ಆದ್ದರಿಂದ ಹಬ್ಬಕಾಗಿ ವಿಶೇಷ ಕಿಟ್‍ಗಳನ್ನು ಸರ್ಕಾರದ ವತಿಯಿಂದ ನೀಡಲಾಗುತ್ತಿದೆ. ಓಣಂ ವಿಶೇಷ ಕಿಟ್‍ಗಳನ್ನು ಪ್ಯಾಕ್ ಮಾಡಿ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೂಲಕ ರೇಷನ್ ಅಂಗಡಿಗಳಿಗೆ ತಲುಪಿಸಲಾಗುತ್ತದೆ. ಒಂದು ದಿನಸಿ ಕಿಟ್ ಮೌಲ್ಯ ಸುಮಾರು 500 ರೂ. ಆಗಿದೆ.