ಕುಂದಾಪುರ: ಶವಕ್ಕೆ ಕೊರೊನಾ ಪಾಸಿಟಿವ್! ಶವದರ್ಶನಗೈದವರು ಕಂಗಾಲು!!

ಕುಂದಾಪುರ: ಕೊರೋನಾ ಪಾಸಿಟಿವ್ ಎಂದ ಕೂಡಲೇ ಸೀಲ್ ಡೌನ್, ಲಾಕ್ ಡೌನ್, ಕ್ವಾರಂಟೈನ್ ಮುಂತಾದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಸರ್ವೆ ಸಾಮಾನ್ಯವಾಗಿರುವ ಈ ಸಂದರ್ಭದಲ್ಲಿ ಕುಂದಾಪುರದ ಖಾಸಗಿ ಆಸ್ಪತಯೊಂದರಲ್ಲಿ ಯಾವುದೇ ತಡೆಯಿಲ್ಲದೆ ಮರಣ ಹೊಂದಿದ ವ್ಯಕ್ತಿಯ ಶವದ ದರ್ಶನವನ್ನು ಪಡೆದ ನೂರಾರು ಜನ ತಲ್ಲಣಗೊಂಡಿರುವ ಘಟನೆ ನಡೆದಿದೆ. ಇದಕ್ಕೆ ಕಾರಣವಾಗಿರುವುದು ಮೃತ ವ್ಯಕ್ತಿಗೆ ಕೊರೋನಾ ಸೋಂಕು ತಗಲಿತ್ತು ಎಂಬ ಸುದ್ದಿ.
ಕುಂದಾಪುರ ನಿವಾಸಿ ಉದ್ಯಮಿಯೋರ್ವರು ಕಳೆದ ಶನಿವಾರ ಕಫ ಹಾಗೂ ಮಧುಮೇಹದ ತೊಂದರೆಯಿಂದ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲ್ಪಟ್ಟಿದ್ದರು. ವಾಡಿಕೆಯಂತೆ ಕೋವಿಡ್ 19 ತಪಾಸಣೆಯೂ ನಡೆದು ಒಂದು ವರದಿ ನೆಗೆಟಿವ್ ಬಂದಿದ್ದು ಇನ್ನೊಂದು ಬರಲು ಬಾಕಿ ಇದೆ ಎಂದು ಹೇಳಲಾಗಿತ್ತು. ಬಳಿಕ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದು ಮಂಗಳವಾರ ಅವರ ಆರೋಗ್ಯಸ್ಥಿತಿ ತೀರಾ ಬಿಗಡಾಯಿಸಿತ್ತು. ಈ ಸಂದರ್ಭದಲ್ಲಿ ಅವರನ್ನು ಮಣಿಪಾಲಕ್ಕೆ ಕೊಂಡೊಯ್ಯುವ ಪ್ರಯತ್ನ ನಡೆದರೂ ಮತ್ತೆ ಆರೋಗ್ಯ ಸ್ಥಿತಿ ಕೊಂಚ ಸುಧಾರಿಸಿದ್ದರಿಂದ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿತ್ತೆನ್ನಲಾಗಿದೆ. ಆದರೆ ಮರುದಿನ ಅಂದರೆ ನಿನ್ನೆ ಬೆಳಗ್ಗೆ ವ್ಯಕ್ತಿಯು ಮರಣ ಹೊಂದಿದ್ದರೆನ್ನಲಾಗಿದೆ. ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸಂಬಂಧಿಕರ ಸಹಿತ ನೂರಾರು ಜನ ಆಸ್ಪತ್ರೆಗೆ ತೆರಳಿ ಶವದ ದರ್ಶನವನ್ನು ಪಡೆದಿದ್ದಾರೆ. ಈ ನಡುವೆ ಶವವನ್ನು ಮನೆಗೆ ಸಾಗಿಸುವ ವಿಚಾರ ಬಂದಾಗ ಕೋವಿಡ್ ರಿಪೋರ್ಟ್ ಬರಬೇಕು ಆದ್ದರಿಂದ ಶವವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ ಎಂಬ ಸುದ್ದಿ ಹರಿದಾಡಲಾರಂಭಿಸಿದರೂ, ಮೃತರ ಶವ ದರ್ಶನಕ್ಕೆ ಯಾವುದೇ ಅಡ್ಡಿ ಆತಂಕವಿಲ್ಲದೆ ಇದ್ದುದರಿಂದ ಶವ ದರ್ಶನದ ಕಾರ್ಯ ಮಾತ್ರ ಮಧ್ಯಾಹ್ನದ ತನಕ ಮುಂದುವರಿದಿತ್ತು. ಸಂಜೆ ವೇಳೆ ಶವವನ್ನು ಕುಂದಾಪುರದ ಖಾಸಗಿ ಆಸ್ಪತ್ರೆಯ ಶವಾಗಾರಕ್ಕೆ ಒಯ್ಯಲಾಗಿದ್ದು ಈ ನಡುವೆ ಮೃತದೇಹದ ತಪಾಸಣಾ ವರದಿ ಪಾಸಿಟಿವ್ ಎಂದು ಬಂದಿದೆ ಎಂಬ ಸುದ್ದಿ ಶವದರ್ಶನವನ್ನು ಗೈದವರನ್ನು ತಲ್ಲಣಗೊಳಿಸಿಬಿಟ್ಟಿದೆ.
ವಿದೇಶದಲ್ಲಿರುವ ಅವರ ಮಕ್ಕಳು ಆಗಮಿಸಿದ ನಂತರ ರಾತ್ರಿ ಸುಮಾರು 11.30ರ ಹೊತ್ತಿಗೆ ಸೋಂಕು ಪೀಡಿತ ವ್ಯಕ್ತಿಯ ಶವದಂತೆ ವಾರಿಯರ್ಸ್ ಗಳು ಕುಂದಾಪುರ ಜಾಮಿಯಾ ಮಸೀದಿಯಲ್ಲಿ ತಡ ರಾತ್ರಿ ಶವವನ್ನು ದಫನಗೊಳಿಸಿದ್ದಾರೆ. ವಿಶೇಷವೆಂದರೆ ಈ ಸಂದರ್ಭದಲ್ಲಿ ಕೊರೊನಾ ಸೋಂಕಿತ ಶವವನ್ನು ಕಾನೂನಿನಂತೆ ವಿಲೇವಾರಿಗೊಳಿಸುವ ಯಾವುದೇ ಕಾನೂನು ನಿಯಮಗಳನ್ನು ಪಾಲಿಸದೆ ಕಾಟಾಚಾರಕ್ಕೆ ಎಂಬಂತೆ ಸರ್ಕಾರಿ ಆಂಬ್ಯುಲೆನ್ಸ್ ಸಹಿತ ಓರ್ವ ಸಿಬ್ಬಂದಿ ಉಪಸ್ಥಿತನಿದ್ದು ಕವಚಧಾರಿ ವಾರಿಯರ್ಸ್‍ಗಳ ಫೋಟೋವನ್ನು ಕ್ಲಿಕ್ಕಿಸಿದ್ದಾನೆ. ಮರುದಿನ ಗುರುವಾರ ಮೃತರ ಮನೆಗೆ ತೆರಳಿದ ಆಶಾ ಕಾರ್ಯ ಕರ್ತೆಯರು ಮೃತರ ಪತ್ನಿ ಮತ್ತು ಪುತ್ರನನ್ನು ಕೋವಿಡ್ ಟೆಸ್ಟ್‍ಗೆ ಒಳಪಡಬೇಕೆಂದು ಸೂಚಿಸಿದ್ದಾರೆ. ಮೃತ ವ್ಯಕ್ತಿಗೆ ಪಾಸಿಟಿವ್ ಇದೆ ಎನ್ನುವ ವರದಿಯ ಪ್ರತಿ ಮೊಬೈಲ್ ನಲ್ಲಿದೆ ಎನ್ನಲಾಗುತ್ತಿದ್ದರೂ ಒರಿಜಿನಲ್ ವರದಿ ಇನ್ನೂ ಬರಲಿಲ್ಲಾ ಎಂದು ಕೆಲವು ಮೂಲಗಳು ಹೇಳುತ್ತಿವೆ. ಒಂದುವೇಳೆ ನಿಜಕ್ಕೂ ಮೃತ ವ್ಯಕ್ತಿಗೆ ಪಾಸಿಟಿವ್ ಇದ್ದಿದ್ದೇ ಹೌದಾದರೆ ಮುಂದೇನು ಎಂಬ ಆತಂಕ ಸಂಬಂಧಿಕರನ್ನು ಕಾಡಲಾರಂಭಿಸಿದೆ.

Leave a Reply

Your email address will not be published. Required fields are marked *