`ಕಿಸ್’ ಕೊಟ್ಟ ತಹಶೀಲ್ದಾರ್ ವಿರುದ್ಧ ಮಹಿಳೆ ದೂರು

ಕೊಪ್ಪಳ: ತಹಶೀಲ್ದಾರ್ ಕಚೇರಿಯಲ್ಲಿ ಸಹೋದ್ಯೋಗಿ ಮಹಿಳೆಗೆ ಕಿಸ್ ಕೊಟ್ಟಿದ್ದ ಕುಷ್ಟಗಿ ತಹಶೀಲ್ದಾರ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಘಟನೆಯ ಸಿಸಿ ಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕುಷ್ಟಗಿ ತಹಶೀಲ್ದಾರ್ ಗುರು ಬಸವರಾಜ್ ವಿರುದ್ಧ ನೊಂದ ಮಹಿಳೆ ಕುಷ್ಟಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಗ್ರಾಮ ಲೆಕ್ಕಾಧಿಕಾರಿಯಾಗಿರುವ ಮಹಿಳೆ ಹಲವು ಆರೋಪಗಳನ್ನು ದೂರಿನಲ್ಲಿ ಮಾಡಿದ್ದಾಳೆ. ಗುರು ಬಸವರಾಜ್ ಕುಷ್ಟಗಿಗೆ ಬಂದ ದಿನದಿಂದ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಪ್ರತಿನಿತ್ಯ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದರು. ತನಗೆ ನ್ಯಾಯ ಕೊಡಿಸಿ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ಐಪಿಸಿ ಸೆಕ್ಷನ್ 354 (ಮಹಿಳೆಯರಿಗೆ ಕಿರಿಕಿರಿ ಮಾಡುವುದು), 354 (ಬಿ), 506ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ತಹಶೀಲ್ದಾರ್ಗೆ ನೋಟಿಸ್ ನೀಡುವ ಸಾಧ್ಯತೆ ಇದೆ. ಎರಡು ತಿಂಗಳ ಹಿಂದೆ ಗುರು ಬವಸರಾಜ್ ಕಚೇರಿಯಲ್ಲಿಯೇ ಗ್ರಾಮ ಲೆಕ್ಕಾಧಿಕಾರಿಯಾಗಿರುವ ಮಹಿಳೆಯನ್ನು ಹಿಡಿದೆಳೆದು ಕಿಸ್ ಕೊಟ್ಟಿದ್ದರು. ಬಸವರಾಜ್ ಸದ್ಯ ಕುಷ್ಟಗಿಯಿಂದ ವರ್ಗಾವಣೆಗೊಂಡಿದ್ದಾರೆ. ಕೊಪ್ಪಳದ ನಗರಾಭಿವೃದ್ಧಿ ಕೋಶದಲ್ಲಿ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.