ಕಿಮ್‌ ಜಾಂಗ್‌ ಉನ್‌ ಮೃತಪಟ್ಟಿಲ್ಲ! ಫೊಟೋ ರಿಲೀಸ್‌ ಮಾಡಿದ ಉ.ಕೊರಿಯಾ

ಸಿಯೋಲ್‌: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಆರೋಗ್ಯವಾಗಿದ್ದಾನೆ ಎಂದು ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮ ಹೇಳಿದೆ. ಅಲ್ಲದೆ ಕಿಮ್ ‌ತನ್ನ ಪಕ್ಷದ ಮುಖಂಡರ ಜೊತೆ ಸಭೆ ನಡೆಸುತ್ತಿರುವ ಫೋಟೋವನ್ನು ಬಿಡುಗಡೆ ಮಾಡಿದೆ. ಕೊರೊನಾ ವೈರಸ್‌ ನಿಯಂತ್ರಣ ಸಂಬಂಧ ಈ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ವರದಿಯಾಗಿದೆ.
ಇತ್ತೀಚಿಗೆ ಕಿಮ್‌ ಜಾಂಗ್‌ ಉನ್‌ ಈಗ ಕೋಮಾಗೆ ಜಾರಿದ್ದಾನೆ ಎಂದು ವರದಿಯಾಗಿತ್ತು. ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷರ ಆಪ್ತ ಅಧಿಕಾರಿಯೊಬ್ಬರ ಹೇಳಿಕೆ ಆಧಾರಿಸಿ ‘ಕೊರಿಯಾ ಹೆರಾಲ್ಡ್’ ವರದಿ ಮಾಡಿತ್ತು. ಕಿಮ್‌ ಜಾಂಗ್‌ ಮೃತಪಟ್ಟಿಲ್ಲ. ಸದ್ಯ ಈಗ ಉತ್ತರ ಕೊರಿಯಾದ ಆಡಳಿತವನ್ನು ಉನ್ ಸಹೋದರಿ ಕಿಮ್ ಯೊ ಜಾಂಗ್ ನೋಡಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾಗಿ ಹೇಳಿತ್ತು. ಸಾಮಾಜಿಕ ಜಾಲತಾಣದಲ್ಲಿ ಕಿಮ್‌ ಸತ್ತಿದ್ದಾನೆ ಎಂಬುದರ ಬಗ್ಗೆ ಚರ್ಚೆ ನಡೆದಿತ್ತು. ಕಿಮ್‌ ಜಾಂಗ್‌ ಆರೋಗ್ಯದ ಬಗ್ಗೆ ವರದಿಯಾಗುವುದು ಇದೇ ಮೊದಲೆನಲ್ಲ. ಈ ವರ್ಷದ ಏಪ್ರಿಲ್‌ನಲ್ಲಿ ಆತ ಮೃತಪಟ್ಟಿದ್ದಾನೆ ಎಂದೇ ವರದಿಯಾಗಿತ್ತು. ಜಪಾನ್‌ ಮಾಧ್ಯಮಗಳ ವರದಿಯಿಂದ ಸಂಚಲನ ಸೃಷ್ಟಿಯಾಗಿತ್ತು. ಕಿಮ್ ಚೈನ್ ಸ್ಮೋಕರ್ ಆಗಿದ್ದು, ಆತನ ದೇಹದ ತೂಕ ಜಾಸ್ತಿಯಾಗಿದೆ. ಜೊತೆಗೆ ಕುಟುಂಬ ಈ ಹಿಂದೆಯಿಂದಲೂ ಹೃದಯರಕ್ತನಾಳದ ಸಮಸ್ಯೆಯನ್ನು ಬಳಲಿದ್ದ ಇತಿಹಾಸವನ್ನು ಹೊಂದಿದೆ ಎಂದು ವರದಿಯಾಗಿದೆ. ಈ ಕಾರಣದಿಂದ ಆತನ ಆರೋಗ್ಯ ಹದಗೆಟ್ಟಿದ್ದು ಆತ ಸಾವನ್ನಪ್ಪಿರಬಹುದು ಎಂದು ಹೇಳಲಾಗಿತ್ತು. ಈ ನಡುವೆ ಚೀನಾದಿಂದ ಉನ್ನತ ವೈದ್ಯರ ತಂಡ ಉತ್ತರ ಕೊರಿಯಾಗೆ ಹೋಗಿದ್ದು, ಆತನಿಗೆ ಚಿಕಿತ್ಸೆ ನೀಡುತ್ತಿದೆ ಎಂದು ಹೇಳಲಾಗಿತ್ತು. ಮತ್ತೆ ಕಿಮ್‌ ಜಾಂಗ್‌ ಸುದ್ದಿಯಾದ ಹಿನ್ನೆಲೆಯಲ್ಲಿ ಜನ ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *