ಐಪಿಎಲ್ ಟೈಟಲ್ ಪ್ರಾಯೋಜಕತ್ವಕ್ಕೆ ಪತಂಜಲಿ ಬಿಡ್ಡಿಂಗ್?

ನವದೆಹಲಿ: ದೇಶದಲ್ಲಿ ಬಾಯ್ಕಾಟ್ ಚೀನಾ ಅಭಿಯಾನ ವೇಗ ಪಡೆದುಕೊಂಡ ಹಿನ್ನೆಲೆಯಲ್ಲಿ ಐಪಿಎಲ್ನ ಟೈಟಲ್ ಸ್ಪಾನ್ಸರ್ನಿಂದ ಈಗಾಗಲೇ ವಿವೋ ಹಿಂದೆಸರಿದಿದೆ. ಇದೀಗ ಬಾಬಾ ರಾಮ್ದೇವ್ ಅವರ ಪತಂಜಲಿ ಸಂಸ್ಥೆ ವಿವೋ ಸ್ಥಾನ ತುಂಬುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಟೈಟಲ್ ಪ್ರಾಯೋಜಕತ್ವದ ಬಿಡ್ನಲ್ಲಿ ಪತಂಜಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹರಿದ್ವಾರ ಮೂಲದ ಪತಂಜಲಿ ಸಂಸ್ಥೆಯ ವಕ್ತಾರ ಎಸ್ಕೆ ತಿಜಾರವಾಲಾ, ಐಪಿಎಲ್ ಬಿಡ್ಡಿಂಗ್ನಲ್ಲಿ ಪಾಲ್ಗೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದೇವೆ. ವೋಕಲ್ ಫಾರ್ ಲೋಕಲ್ ಅಭಿಯಾನವಾಗಿದ್ದು, ಭಾರತದ ಸಂಸ್ಥೆಯನ್ನು ವಿಶ್ವಮಟ್ಟಕ್ಕೆ ಪರಿಚಯಿಸುವ ಹಾಗೂ ಬೆಳೆಸುವ ಇರಾದೆ ಇದೆ. ಆದರೆ ಬಿಡ್ಡಿಂಗ್ನಲ್ಲಿ ಪಾಲ್ಗೊಳ್ಳುವ ಬಗ್ಗೆ ಅಂತಿಮ ತೀರ್ಮಾನ ಇನ್ನೂ ತೆಗೆದುಕೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ. ಐಪಿಎಲ್ ಪ್ರಾಯೋಜಕತ್ವದ ಬಿಡ್ಡಿಂಗ್ಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾವು ಇತ್ತೀಚೆಗೆ ಆಸಕ್ತರನ್ನು ಆಹ್ವಾನಿಸಿತ್ತು. ಐಪಿಎಲ್ ಟೈಟಲ್ ಪ್ರಾಯೋಜಕತ್ವ ನೀಡುತ್ತಿದ್ದ ಚೀನಾ ಮೂಲದ ಮೊಬೈಲ್ ಉತ್ಪಾದನಾ ಕಂಪೆನಿ ‘ವಿವೋ’ ಪ್ರಾಯೋಜಕತ್ವದಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿತ್ತು. ಲಡಾಕ್ ಗಡಿ ಸಂಘರ್ಷದಲ್ಲಿ 20 ಭಾರತೀಯ ಯೋಧರು ಸಾವನ್ನಪ್ಪಿದ್ದರಿಂದ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂಬ ಮಾತುಗಳು ಭಾರತದಲ್ಲಿ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ವಿವೋ ಪ್ರಾಯೋಜಕತ್ವದ ಒಪ್ಪಂದ ಮುರಿದುಕೊಂಡಿತ್ತು. ಈ ಬೆಳವಣಿಗೆ ಪತಂಜಲಿ ಕಂಪೆನಿಯು ಐಪಿಎಲ್ ಪ್ರಾಯೋಜಕತ್ವದತ್ತ ಆಸಕ್ತಿ ತೋರುವಂತೆ ಮಾಡಿದೆ. ಹೀಗಾಗಿ ಹರಿದ್ವಾರ ಮೂಲಕ ಸಂಸ್ಥೆ ಪತಂಜಲಿ, ತನ್ನಲ್ಲಿನ ಆಯುರ್ವೇದ ಮೂಲ ಎಫ್ಎಮ್ಸಿಜಿ (ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್) ಉತ್ಪನ್ನಗಳಿಗೆ ಐಪಿಎಲ್ ಪ್ರಾಯೋಜಕತ್ವದ ಮೂಲಕ ಜಾಗತಿಕ ಮಾರುಕಟ್ಟೆ ಸೃಷ್ಟಿಸಲು ಯೋಜಿಸಿದೆ.