ಐಟಿ ದಾಳಿ: ಚೀನಿ ನಾಗರಿಕರ ಅಕ್ರಮ ದಂಧೆ ಬಯಲು

ದೆಹಲಿ: ದೆಹಲಿಯ ವಿವಿಧೆಡೆ ನಿನ್ನೆ ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ನಗದು ವಶ ಪಡಿಸಿಕೊಂಡಿದ್ದಾರೆ. ಚೀನಿಯರು ಹಾಗೂ ಸ್ಥಳೀಯರು ಮನಿ ಲಾಂಡ್ರಿಂಗ್ ಮೂಲಕ ಸಂಗ್ರಹಿಸಿದ್ದ 1000 ಕೋಟಿ ರು ಮೌಲ್ಯದ ಆಸ್ತಿ ಈಗ ಐಟಿ ದಾಳಿಯಲ್ಲಿ ಪತ್ತೆಯಾಗಿದೆ.
ಬೇನಾಮಿ ಕಂಪೆನಿಗಳ ಹೆಸರಿನಲ್ಲಿ ಅಕ್ರಮವಾಗಿ ನಗದು ಚಲಾವಣೆ ದಂಧೆ ನಡೆಸುತ್ತಿದ್ದರು. ಚೀನಾ ಮೂಲದ ಸಬ್ಸಿಡಿ ಕಂಪೆನಿ ಎಂದು ಹೇಳಿ ಸುಮಾರು 100 ಕೋಟಿ ರೂ. ಶೆಲ್ ಕಂಪೆನಿಗಳಿಂದ ಪಡೆದಿದ್ದರು. ಭಾರತದೆಲ್ಲೆಡೆ ರಿಟೈಲ್ ಶೋರೂಮ್ ಆರಂಭಿಸುವ ಯೋಜನೆಯಿತ್ತು ಎಂದು ತಿಳಿದು ಬಂದಿದೆ. ತೆರಿಗೆ ಇಲಾಖೆಯ ನಿಯಮಾವಳಿ ರೂಪಿಸುವ ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಯು ಚೀನಿಯರು ಮನಿಲಾಂಡ್ರಿಂಗ್, ಹವಾಲ ದಂಧೆಯಲ್ಲಿ ತೊಡಗಿರುವ ಬಗ್ಗೆ ಸೂಚನೆ ನೀಡಿತ್ತು. ಅದರಂತೆ ಕೆಲ ಕಾಲದಿಂದ ಈ ಬಗ್ಗೆ ಪೂರ್ವಭಾವಿ ತನಿಖೆ ನಡೆಸಲಾಗುತ್ತಿತ್ತು. ಬ್ಯಾಂಕ್ ಅಧಿಕಾರಿಗಳು, ಚೀನಿಯರು ಹೊಂದಿದ್ದ 40 ಬ್ಯಾಂಕ್ ಖಾತೆ ಮೂಲಕ ಬೇನಾಮಿ ಕಂಪೆನಿಗಳಿಗೆ ಹಣ ರವಾನೆಯಾಗಿರುವುದು ಪತ್ತೆಯಾಗಿತ್ತು. ಸರಿ ಸುಮಾರು 1000 ಕೋಟಿ ವ್ಯವಹಾರ ನಡೆದಿದೆ ಎಂದು ಐಟಿ ಇಲಾಖೆ ಮಾಹಿತಿ ನೀಡಿದೆ. ಹವಾಲ ವ್ಯವಹಾರ ನಡೆದಿರುವ ಬಗ್ಗೆ ದಾಖಲೆಗಳು ಸಿಕ್ಕಿವೆ. ಮನಿ ಲಾಂಡ್ರಿಂಗ್ ನಲ್ಲಿ ಬ್ಯಾಂಕ್ ಸಿಬ್ಬಂದಿ, ಚಾರ್ಟೆರೆಡ್ ಅಕೌಂಟಂಟ್ಸ್ ಕೈವಾಡ ಇರುವುದು ದಾಳಿ ವೇಳೆ ಪತ್ತೆಯಾಗಿದೆ. ಹಾಂಕಾಂಗ್, ಯುಎಸ್ ಡಾಲರ್ ಗಳಲ್ಲಿ ಹವಾಲ ವ್ಯವಹಾರ ನಡೆದಿದೆ ಎಂದು ಸಿಬಿಡಿಟಿ ಹೇಳಿದೆ.

Leave a Reply

Your email address will not be published. Required fields are marked *