ಎವಿನ್‌ ಲೂವಿಸ್‌ ಬ್ಯಾಟಿಂಗ್‌ ಆರ್ಭಟ ನೆವಿಸ್‌ ಪ್ಯಾಟ್ರಿಯಾಟ್ಸ್‌ಗೆ ಸುಲಭ ಜಯ

ಪೋರ್ಟ್‌ ಆಫ್‌ ಸ್ಪೇನ್‌: ಆರಂಭಿಕ ಎವಿನ್‌ ಲೂವಿಸ್‌ ಪ್ರದರ್ಶಿಸಿದ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಇಲ್ಲಿ ನಡೆಯುತ್ತಿರುವ ಕೆರೇಬಿಯನ್‌ ಪ್ರೀಮಿಯರ್‌ ಲೀಗ್‌ನ ಬಾರ್ಬೆಡೊಸ್‌ ಟ್ರೈಡೆಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಸೈಂಟ್‌ ಕೀಟ್ಸ್‌ ಹಾಗೂ ನೆವಿಸ್‌ ಪ್ಯಾಟ್ರಿಯಾಟ್ಸ್‌ ಆರು ವಿಕೆಟ್‌ಗಳ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್‌ ನಡೆಸಿದ ಬಾರ್ಬೆಡೊಸ್‌ ಟ್ರೈಡೆಂಟ್ಸ್‌ ನಿಗದಿತ ೨೦ ಓವರ್‌ಗಳಲ್ಲಿ ಏಳು ವಿಕೆಟ್‌ ನಷ್ಟಕ್ಕೆ ೧೫೧ ರನ್‌ ಗಳಿಸಿತು. ಆರಂಭಿಕ ಹಂತದಲ್ಲಿ ಜೊನಾಥನ್‌ ಚಾರ್ಲ್ಸ್‌ (೨೪), ಶಾಯ್‌ ಹೋಪ್‌ (೨೯) ಹಾಗೂ ಕಾಯ್ಲ್‌ ಮೇಯರ್ಸ್‌ (೨೨) ಕೆಲಹೊತ್ತು ಕ್ರೀಸ್‌ನಲ್ಲಿದ್ದು, ತಂಡಕ್ಕೆ ಆಸರೆಯಾಗಿದ್ದರು. ಅಲ್ಲದೆ ಮಧ್ಯಮ ಕ್ರಮಾಂಕದಲ್ಲಿ ಕೋರಿ ಆಂಡರ್ಸನ್‌ (೩೧) ಹಾಗೂ ಆಶ್ಲೆ ನರ್ಸ್‌ (೨೫) ವೇಗದ ಬ್ಯಾಟಿಂಗ್‌ ಪ್ರದರ್ಶಿಸಿದ ಫಲವಾಗಿ ತಂಡ ೧೫೦ರ ಗಡಿ ದಾಟಲು ಸಾಧ್ಯವಾಯಿತು. ನೆವಿಸ್‌ ಪರ ಜಾನ್‌ ರಸ್‌ ಜಗೆಸರ್‌ ಎರಡು ವಿಕೆಟ್‌ ಪಡೆದರು.
ಗುರಿ ಬೆನ್ನತ್ತಿದ ನೆವಿಸ್‌ಗೆ ಆರಂಭಿಕರಾದ ಕ್ರಿಸ್‌ ಲಿನ್‌ (೧೬) ಹಾಗೂ ಲೂವಿಸ್‌ ಅಬ್ಬರದ ಆರಂಭ ನೀಡಿದರು. ಅದರಲ್ಲೂ ಲೂವಿಸ್‌ ಅಬ್ಬರದ ಆಟ ಪ್ರದರ್ಶಿಸಿ, ಎದುರಾಳಿ ತಂಡದ ಬೌಲರ್ಸ್‌ಗಳ ಮೇಲೆ ಒತ್ತಡ ಹೇರಿದರು. ಪರಿಣಾಮ ತಂಡ ೧೯.೩ ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ನಷ್ಟಕ್ಕೆ ೧೫೨ ರನ್‌ ಗಳಿಸಿ, ಜಯ ಸಾಧಿಸಿತು. ಲೂವಿಸ್‌ ೬೦ ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ೯ ಸಿಕ್ಸರ್‌ ನೆರವಿನಿಂದ ೮೯ ರನ್‌ ಗಳಿಸಿದರು. ಅಂತಿಮ ಹಂತದಲ್ಲಿ ಬೆನ್‌ ಡಂಕ್‌ ವೇಗದ ಅಜೇಯ ೨೨ ರನ್‌ ಗಳಿಸಿ, ತಂಡವನ್ನು ಗೆಲುವಿನ ದಡ ಸೇರಿಸಿದರು. ಟ್ರೈಡೆಂಟ್ಸ್‌ ಪರ ಕಾಯ್ಲ್‌ ಮೇಯರ್ಸ್‌ ಎರಡು ವಿಕೆಟ್‌ ಪಡೆದರು.

Leave a Reply

Your email address will not be published. Required fields are marked *