ಉಳ್ಳಾಲ‌: ತ್ಯಾಜ್ಯ ಶುದ್ಧೀಕರಣ ಘಟಕಕ್ಕೆ ವಿರೋಧ, ಜಿಲ್ಲಾಧಿಕಾರಿಗೆ ಮನವಿ

ಉಳ್ಳಾಲ‌: ಉಳ್ಳಾಲದ ಕೋಡಿಯಲ್ಲಿ ಉದ್ದೇಶಿತ ದ್ರವತ್ಯಾಜ್ಯ ಘಟಕಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದ್ದು ಗುರುವಾರ ಮುಖಂಡರ ನಿಯೋಗ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಘಟಕ ಸ್ಥಳಾಂತರಿಸುವಂತೆ ಮನವಿ ಸಲ್ಲಿಸಿದೆ.
ಉಳ್ಳಾಲ‌ ನಗರಸಭಾ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ದ್ರವತ್ಯಾಜ್ಯ ಶುದ್ಧೀಕರಿಸುವ ನಿಟ್ಟಿನಲ್ಲಿ ಪುರಸಭಾ ವ್ಯಾಪ್ತಿಯ ಸೇನರಬೈಲಿನಲ್ಲಿ ಜಮೀನು ಗುರುತಿಸಲಾಗಿದೆ. ಈಗಾಗಲೇ ಯೋಜನೆ ರೂಪಿಸಲಾಗಿದ್ದು ಶೀಘ್ರ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆ ಇದೆ. ಈ ನಡುವೆ ಘಟಕ ನಿರ್ಮಾಣದಿಂದ ಮುಂದಾಗಬಹುದಾದ ತೊಂದರೆಗಳಿಂದ ಆತಂಕಕ್ಕೀಡಾಗಿರುವ ಪುರಸಭೆಯ ಸ್ಥಳೀಯ ಸದಸ್ಯರು, ಧಾರ್ಮಿಕ, ಸಾಮಾಜಿಕ ಮತ್ತು ವಿವಿಧ ಸಂಘಟನೆಗಳ ಮುಖಂಡರು ವಿರೋಧ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ನಿಗದಿತ ಪ್ರದೇಶ ಜನವಸತಿಯಿಂದ ಕೂಡಿದ್ರು, 300 ಮೀಟರ್ ಅಂತರದಲ್ಲಿ ಕನಿಷ್ಠ 7 ಸಾವಿರ ಜನಸಂಖ್ಯೆ, ಮೂರು ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಆರು ಮಸೀದಿಗಳು, ಮೂರು ದೇವಸ್ಥಾನಗಳಿವೆ. ಈ ಜಾಗ ಗುರುತಿಸುವ ಸಂದರ್ಭ ಅಧಿಕಾರಿಗಳು ಮತ್ತು ಜನಪ್ರಗತಿನಿಧಿಗಳು ಸ್ಥಳೀಯರಿಗೆ ಯಾವುದೇ ಮಾಹಿತಿ ನೀಡಿಲ್ಲ.
ಈ ಪ್ರದೇಶದಲ್ಲಿ ಅತ್ಯಧಿಕ ಮೀನುಗಾರ ಕಾರ್ಮಿಕರು, ಸಣ್ಣಪುಟ್ಟ ಮೀನುಗಾರಿಕಾ ಉದ್ಯಮ ಇದ್ದು ಕಲುಷಿತ ನೀರು ಬಿಡಲಾಗುತ್ತಿದ್ದು, ಇದರಿಂದಾಗಿ ಈಗಾಗಲೇ ಪರಿಸರ ಕಲುಷಿತಗೊಂಡಿದೆ. ಇಲ್ಲೇ ಒಳಚರಂಡಿ ತ್ಯಾಜ್ಯ ಶುದ್ದೀಕರಣ ಘಟಕ ನಿರ್ಮಾಣಗೊಂಡರೆ ವಾಯು ಮಾಲಿನ್ಯ, ಪರಿಸರ ಮಾಲಿನ್ಯ ಹೆಚ್ಚಾಗಿ ದುರ್ವಾಸನೆ ಮತ್ತು ಚರ್ಮರೋಗ, ಸಾಂಕ್ರಾಮಿಕ ರೋಗ ಹರಡುವ ಅಪಾಯವಿದೆ. ಈ‌ ಹಿನ್ನೆಲೆಯಲ್ಲಿ ನಿಗದಿತ ಜಾಗದಿಂದ ಘಟಕ ಸ್ಥಳಾಂತರಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ.
ಒಳಚರಂಡಿ ಕಾಮಗಾರಿ ಶೀಘ್ರ ಮುಗಿಸಿ
ಉಳ್ಳಾಲ‌ ಪುರಸಭಾ ವ್ಯಾಪ್ತಿಯಲ್ಲಿ 65,000 ಜನಸಂಖ್ಯೆ ಇದ್ದರೂ ಇಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ಒಳಚರಂಡಿ ಯೋಜನೆಗೆ ಏಳು ವರ್ಷಗಳ ಹಿಂದೆಯೇ 70 ಕೋಟಿ ರೂಪಾಯಿ ಮಂಜೂರಾಗಿದ್ದು, ರಸ್ತೆ ಅಗೆದು ಪೈಪ್ ಲೈನ್ ಹಾಕಲಾಗಿದ್ದರೂ ಶೇ.20ರಷ್ಟು ಕಾಮಗಾರಿ ಬಾಕಿ ಇದೆ. ಶುದ್ಧೀಕರಣ ಘಟಕ ಅಗತ್ಯವಿದ್ದರೂ ಕೊಡಿ-ಕೋಟೆಪುರ ಸಹಿತ ಜನವಸತಿ ಪ್ರದೇಶದಲ್ಲಿ ಎಲ್ಲಿಯೂ ಶುದ್ದೀಕರಣ ಘಟಕ ಸ್ಥಾಪಿಸದೆ, ಪರ್ಯಾಯ ಸ್ಥಳ‌ ಗುರುತಿಸಬೇಕಾಗಿದೆ. ಇದಕ್ಕೆ ಉಳ್ಳಾಲ ಪುರಸಭೆಯ 31 ಕೌನ್ಸಿಲರ್ ಗಳ ಪೈಕಿ 20 ಕೌನ್ಸಿಲರ್ ಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನು ಪರಿಗಣಿಸಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಈ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಈ ಸಂದರ್ಭ ಶಾಸಕ ಯು.ಟಿ.ಖಾದರ್, ವಿದಾನಪರಿಷತ್ ಸದಸ್ಯ ಐವನ್ ಡಿಸೋಜ ಸಲಹೆ, ಸೂಚನೆಗಳನ್ನು ನೀಡಿದರು.
ನಿಯೋಗದಲ್ಲಿ ಕೋಟೆಪುರ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ಯು.ಕೆ., ಕೋಡಿ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್, ತೋಟ ಮಸೀದ ಅಧ್ಯಕ್ಷ ಇಬ್ರಾಹಿಂ, ನಾಡದೋಣಿ‌ ಮತ್ತು ಗಿಲ್ ನೆಟ್ ಮೀನುಗಾರರ ಸಂಘದ ಅಧ್ಯಕ್ಷ ಹನೀಫ್ ಸೋಲಾರ್, ಉಳ್ಳಾಲ‌ ಪುರಸಭೆ ಸದಸ್ಯರಾದ ರಮೀಝ್, ಅಝೀಝ್, ಮುಖಂಡರಾದ ಯು.ಕೆ.ನಝೀರ್ ಕೋಡಿ, ಅಕ್ರಂ ಹಸನ್, ರಫೀಕ್, ಅಹ್ಮದ್ ಬಾವ, ಶರೀಫ್, ಲತೀಫ್ ತೋಟ, ಅಝೀಝ್ ಕೋಡಿ, ರಶೀದ್, ಇಸ್ಮಾಯಿಲ್ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *