ಆ.೧೨ಕ್ಕೆ ವಿಶ್ವದ ಮೊದಲ ಕೊರೊನಾ ಲಸಿಕೆ ಲಭ್ಯ

ಲಂಡನ್: ಗಮಲೇಯ ಸಂಶೋಧನಾ ಸಂಸ್ಥೆ ಮತ್ತು ರಷ್ಯಾದ ರಕ್ಷಣಾ ಸಚಿವಾಲಯ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆ ಇದೇ ಆಗಸ್ಟ್ ೧೨ರಂದೇ ಲಭ್ಯವಾಗಲಿದೆ. ಸ್ವತಹ ರಷ್ಯಾದ ಉಪ ಆರೋಗ್ಯ ಸಚಿವ ಒಲೆಗ್ ಗ್ರಿಡ್ನೆವ್ ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಈ ಹಿಂದೆ ಲಸಿಕೆ ಲಭ್ಯವಾಗುವ ಕುರಿತು ಭಾರೀ ಗೊಂದಲ ಏರ್ಪಟ್ಟಿದ್ದು, ಇದೀಗ ಸಂಶಯಗಳಿಗೆ ತೆರೆಬಿದ್ದಂತಾಗಿದೆ.
ಆಗಸ್ಟ್ 12 ರಂದು ಮೊದಲ ಕೊರೊನಾವೈರಸ್ ಲಸಿಕೆ ನೋಂದಾಯಿಸಲಾಗುವುದು ಎಂದು ಉಪ ಆರೋಗ್ಯ ಸಚಿವ ಒಲೆಗ್ ಗ್ರಿಡ್ನೆವ್ ಹೇಳಿದ್ದಾರೆ. ಮೊದಲ ಕ್ಲಿನಿಕಲ್ ಪ್ರಯೋಗಕ್ಕೆ ಒಳಗಾದ ಯೋಧರು ಜುಲೈ 13ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, ಎರಡನೇ ಹಂತದ ಪ್ರಯೋಗದಲ್ಲಿ ಭಾಗಿಯಾದವರು ಜುಲೈ 20ರಂದು ಡಿಸ್ಚಾರ್ಜ್ ಆಗಿದ್ದರು. ಲಸಿಕೆಯ ಮೊದಲ, ಎರಡನೇ ಹಾಗೂ ಮೂರನೇ ಹಂತದ ಪ್ರಯೋಗಗಳು ನಡೆಯುತ್ತಿದೆ. ಪ್ರಯೋಗಗಳು ಬಹಳ ಮುಖ್ಯ. ಲಸಿಕೆ ಸುರಕ್ಷಿತವಾಗಿರಬೇಕು ಎಂದು ನಾವು ಅರ್ಥಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ವೈದ್ಯಕೀಯ ವೃತ್ತಿಪರರು ಮತ್ತು ಹಿರಿಯ ನಾಗರಿಕರು ಲಸಿಕೆ ಪಡೆಯುವವರಲ್ಲಿ ಮೊದಲಿಗರಾಗಿದ್ದಾರೆ ಅಂತ ಗ್ರಿಡ್ನೆವ್ ಹೇಳಿದ್ದಾರೆ. ಈ ಹಿಂದಿನ ವರದಿಯಲ್ಲಿ, ಗಮಲೇಯ ನ್ಯಾಷನಲ್ ರಿಸರ್ಚ್ ಸೆಂಟರ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಕೊರೊನಾವೈರಸ್ ಲಸಿಕೆಯನ್ನು ಪರೀಕ್ಷಿಸುವ ಸ್ವಯಂಸೇವಕರ ಅಂತಿಮ ಪರಿಶೀಲನೆಯು ಭಾಗವಹಿಸುವ ಎಲ್ಲರಲ್ಲೂ ರೋಗನಿರೋಧಕ ಶಕ್ತಿಯನ್ನು ತೋರಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿತ್ತು. ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಜೂನ್ 18 ರಂದು ಪ್ರಾರಂಭವಾಗಿದ್ದು, ಈ ಪ್ರಯೋಗದಲ್ಲಿ 38 ಸ್ವಯಂಸೇವಕರು ಇದ್ದರು ಎನ್ನಲಾಗಿದೆ. ಮತ್ತು ಮೊದಲ ಗುಂಪನ್ನು ಜುಲೈ 15 ರಂದು ಮತ್ತು ಎರಡನೇ ಗುಂಪನ್ನು ಜುಲೈ 20 ರಂದು ಬಿಡುಗಡೆ ಮಾಡಲಾಯಿತು ಎನ್ನಲಾಗಿದೆ.