ಆಲದ ಮರ ಉರುಳಿಬಿದ್ದು ಬೈಕ್ ಸವಾರರು ಗಂಭೀರ

ಚಾಮರಾಜನಗರ: ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಮೇಲೆ ಏಕಾಏಕಿ ಬೃಹತ್ ಗಾತ್ರದ ಆಲದಮರ ಉರುಳಿಬಿದ್ದು ಸವಾರರಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಚಾಮರಾಜನಗರ ಹನೂರು ಪಟ್ಟಣದ ಹೊರವಲಯದ ಮಲೆಮಹದೇಶ್ವರ ಕ್ರೀಡಾಂಗಣದ ಬಳಿ ನಡೆದಿದೆ. ಗಾಯಗೊಂಡವರನ್ನು ಮಾರ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೀರೆಪಾತಿ ಗ್ರಾಮದ ಜೋಸೆಫ್ ಮತ್ತು ಕುಮಾರ್ ಎಂದು ಗುರುತಿಸಲಾಗಿದೆ.
ಬೈಕ್ ಅಜ್ಜೀಪುರ ರಸ್ತೆಯ ಕ್ರೀಡಾಂಗಣದ ಬಳಿಯ ರಾಮಯ್ಯನ ಕೆರೆ ಹತ್ತಿರ ಹೋಗುತ್ತಿದ್ದಾಗ ಹಳೆಯ ಆಲದ ಮರ ಉರುಳಿ ಮೇಲೆ ಬಿದ್ದಿದೆ. ಇದರಿಂದ ಜೋಸೆಫ್ ಗಂಭೀರ ಗಾಯಗೊಂಡಿದ್ದು ಕುಮಾರ್ ಕಾಲಿಗೆ ಗಾಯಗಳಾಗಿವೆ. ಮರದಡಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿ ಹನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಸವಾರರಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.